ಇಸ್ರೋದ ಸಂವಹನ ಉಪಗ್ರಹ ಜಿಸ್ಯಾಟ್-7ಎ ಯಶಸ್ವಿ ಉಡಾವಣೆ
ಚೆನ್ನೈ,ಡ.19: ಭಾರತೀಯ ವಾಯುಪಡೆಯ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವ ತನ್ನ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಬುಧವಾರ ಶ್ರೀಹರಿಕೋಟಾದ ಸತೀಶ ಧವನ್ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಳಿಸಿತು.
ಸಂಜೆ 4:10ಕ್ಕೆ 2,250 ಕೆ.ಜಿ.ತೂಕದ ಉಪಗ್ರಹವನ್ನು ಹೊತ್ತುಕೊಂಡು ಬಾಹ್ಯಾಕಾಶಕ್ಕೆ ನೆಗೆದ ಜಿಎಸ್ಎಲ್ವಿ-ಎಫ್11 ಅದನ್ನು ನಿಗದಿತ ಭೂಸ್ಥಿರ ಕಕ್ಷೆಯಲ್ಲಿ ಸೇರಿಸುವಲ್ಲಿ ಯಶಸ್ವಿಯಾಯಿತು. ಇಸ್ರೋ ನಿರ್ಮಿಸಿರುವ ಉಪಗ್ರಹ ಎಂಟು ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಅದು ಕ್ಯು-ಬ್ಯಾಂಡ್ ಬಳಕೆದಾರರಿಗೆ ಸಂವಹನ ಸಾಮರ್ಥ್ಯವನ್ನು ಒದಗಿಸಲಿದೆ.
ಜಿಎಸ್ಎಲ್ವಿ ಇಸ್ರೋದ ಮೂರು ಹಂತಗಳ ನಾಲ್ಕನೇ ತಲೆಮಾರಿನ ಉಡಾವಣಾ ವಾಹನವಾಗಿದ್ದು,ಇದು ಶ್ರೀಹರಿಕೋಟಾದಿಂದ ಅದರ ಏಳನೇ ಬಾಹ್ಯಾಕಾಶ ಯಾನವಾಗಿದೆ. ಇದರೊಂದಿಗೆ ಇಸ್ರೋಗಾಗಿ ತನ್ನ 69ನೆಯ ಅಭಿಯಾನವನ್ನೂ ಅದು ದಾಖಲಿಸಿತು.
ಜಿಸ್ಯಾಟ್-7ಎ ಉಪಗ್ರಹವನ್ನು ಭಾರತೀಯ ವಾಯುಪಡೆ ಮತ್ತು ಭೂಸೇನೆಗಾಗಿ ನಿರ್ಮಿಸಲಾಗಿದ್ದು,ಅವುಗಳ ಸಂವಹನ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ. ಅದು ವಾಯುಪಡೆಗೆ ತನ್ನ ಭೂ ರಾಡಾರ್ ಕೇಂದ್ರಗಳು ಮತ್ತು ವಾಯುನೆಲೆಗಳು ಹಾಗೂ ಆಗಸದಲ್ಲಿರುವ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ(ಅವಾಕ್ಸ್) ವಿಮಾನದ ನಡುವೆ ಅಂತರ್ ಸಂಪರ್ಕ ಕಲ್ಪಿಸಲು ನೆರವಾಗಲಿದೆ ಮತ್ತು ಡ್ರೋನ್ಗಳ ನಿರ್ವಹಣೆಗಾಗಿ ಭೂ ನಿಯಂತ್ರಣ ಕೇಂದ್ರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲಿದೆ ಎಂದು ಮೂಲಗಳು ತಿಳಿಸಿದವು.