ಲೋಕಸಭೆಯಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ ಅಂಗೀಕಾರ

ಹೊಸದಿಲ್ಲಿ, ಡಿ. 19: ಭಾರತದ ಸಂತಾನ ಹೀನ ದಂಪತಿಗೆ ನಿಸ್ವಾರ್ಥ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡುವ, ಬಾಡಿಗೆ ತಾಯ್ತನದ ಮೇಲೆ ಪರಿಣಾಮಕಾರಿ ನಿಯಂತ್ರಣ ವಿಧಿಸುವ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನ ನಿಷೇಧಿಸುವ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2016 ಅನ್ನು ಬುಧವಾರ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಲೋಕಸಭೆ ಹಲವು ಮುಂದೂಡಿಕೆಗೆ ಸಾಕ್ಷಿಯಾಯಿತು. ಆದರೆ, ಅಡ್ಡಿಗಳ ನಡುವೆ ಮಸೂದೆ ಅಂಗೀಕರಿಸಲಾಯಿತು. ಮಕ್ಕಳಿಲ್ಲದ ದಂಪತಿಗೆ ಮಕ್ಕಳು ಪಡೆಯಲು ಮಾತ್ರ ಈ ಮಸೂದೆ ಅನುಮತಿ ನೀಡುತ್ತದೆ. ಬಾಡಿಗೆ ತಾಯಿ ಹಾಗೂ ಸಂತಾನದ ಅಗತ್ಯತೆ ಇರುವ ದಂಪತಿ ಸೂಕ್ತ ಪ್ರಾಧಿಕಾರದಿಂದ ಪ್ರಮಾಣ ಪತ್ರ ಹೊಂದಿರಬೇಕಾದ ಅಗತ್ಯತೆ ಇದೆ. ಬಾಡಿಗೆ ತಾಯಿ ದಂಪತಿಯ ಹತ್ತಿರದ ಸಂಬಂಧಿಯಾಗಿರಬೇಕು. ಈ ಮಸೂದೆ ರಾಷ್ಟ್ರೀಯ ಬಾಡಿಕೆ ತಾಯ್ತನ ಮಂಡಳಿ, ರಾಜ್ಯ ಬಾಡಿಗೆ ತಾಯ್ತನ ಮಂಡಳಿ ಸ್ಥಾಪಿಸಲು ಹಾಗೂ ಬಾಡಿಗೆ ತಾಯ್ತನದ ಅಭ್ಯಾಸ ಹಾಗೂ ಪ್ರಕ್ರಿಯೆ ನಿಯಂತ್ರಿಸಲು ಸೂಕ್ತ ಅಧಿಕಾರಿಗಳನ್ನು ನಿಯೋಜಿಸಲು ಅವಕಾಶ ನೀಡುತ್ತದೆ.
Next Story





