ತೊಕ್ಕೊಟ್ಟು: ಸಂಚಾರ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳೂರು, ಡಿ.19: ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ತೊಕ್ಕೊಟ್ಟು ಜಂಕ್ಷನ್ ಮತ್ತಿತರ ಕಡೆ ವಾಹನ ತಪಾಸಣೆಯ ಹೆಸರಿನಲ್ಲಿ ದುರ್ವರ್ತನೆ ತೋರುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆಯ ನಿಯೋಗವು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಆಗ್ರಹಿಸಿದೆ.
ಡಿ.18ರಂದು ತೊಕ್ಕೊಟ್ಟಿನಲ್ಲಿ ನಡೆದ ಅಪಘಾತದಲ್ಲಿ ಲಾರಿ ಕ್ಲೀನರ್ ನ ಸಾವಿಗೆ ಸಂಚಾರ ಪೊಲೀಸರೇ ಕಾರಣ. ಇಲ್ಲಿನ ಕರ್ತವ್ಯ ನಿರತ ಪೊಲೀಸರು, ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ಏಕಾಎಕಿ ವಾಹನ ತಡೆದು ನಿಲ್ಲಿಸುತ್ತಾರೆ. ಚಾಲಕರನ್ನು ಗೊಂದಲಕ್ಕೀಡು ಮಾಡುತ್ತಾರೆ. ಹಣಕ್ಕಾಗಿ ಪೀಡಿಸುತ್ತಾರೆ. ವಾಹನ ಚಾಲಕ-ಮಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಮಂಗಳವಾರ ಅಪಘಾತ ನಡೆದಾಗ ಸಾರ್ವಜನಿಕರು ರೊಚ್ಚಿಗೇಳಲು ಈ ಅಧಿಕಾರಿಯ ಬಗೆಗಿನ ಧೋರಣೆಯೂ ಕಾರಣವಾಗಿದೆ. ಹಾಗಾಗಿ ಈ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೆಕೆಂದು ನಿಯೋಗ ಒತ್ತಾಯಿಸಿದೆ.
ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷ ಸಿದ್ದೀಖ್ ತಲಪಾಡಿ, ಉಪಾಧ್ಯಕ್ಷರಾದ ಅರುಣ್ ಭಂಡಾರಿ, ಮುಹಮ್ಮದ್ ಹನೀಫ್ ಯು, ಶಬೀರ್ ಅಬ್ಬಾಸ್, ಅಬೂಬಕರ್, ಪೊಡಿಯಬ್ಬ ತಲಪಾಡಿ, ಸಾಲಿ ಅಡ್ಡೂರು ಮತ್ತಿತರರಿದ್ದರು.