ಡಿ.21ರಿಂದ ಮಂಗಳೂರಿನಲ್ಲಿ ಕರಾವಳಿ ಉತ್ಸವ

ಮಂಗಳೂರು, ಡಿ.19: ಪ್ರಸಕ್ತ ವರ್ಷದ ಕರಾವಳಿ ಉತ್ಸವಕ್ಕೆ ಡಿ.21ರಂದು ಚಾಲನೆ ದೊರಕಲಿದೆ. ಅಂದು ಅಪರಾಹ್ನ 3:30ಕ್ಕೆ ಆಕರ್ಷಕ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆಯು ನೆಹರೂ ಮೈದಾನದಿಂದ ಹೊರಟು ಕರಾವಳಿ ಉತ್ಸವ ಮೈದಾನ ತಲುಪಲಿವೆ. ಸಂಜೆ 6 ಗಂಟೆಗೆ ವಸ್ತುಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಚಾಲನೆ ನೀಡಲಿದ್ದಾರೆ. ಸಂಜೆ 6:30ಕ್ಕೆ ಕರಾವಳಿ ಉತ್ಸವವನ್ನು ಸಂಗೀತ ನಿರ್ದೇಶಕ ಗುರುಕಿರಣ್ ಉದ್ಘಾಟಿಸಲಿದ್ದಾರೆ.
ಕರಾವಳಿ ಉತ್ಸವದ ಅಂಗವಾಗಿ ಲಾಲ್‌ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಡಿ.21ರಿಂದ 45ದಿನಗಳ ಕಾಲ ನಡೆಯುವ ಈ ವಸ್ತು ಪ್ರದರ್ಶನದಲ್ಲಿ ವೈವಿಧ್ಯಮಯ ಮನೋರಂಜನಾ ಚಟುವಟಿಕೆಗಳು, ಅಮ್ಯೂಸ್‌ಮೆಂಟ್‌ಗಳು, ಮಾರಾಟ ಮೇಳ, ಮಕ್ಕಳ ಮನರಂಜನಾ ತಾಣಗಳು ಇರಲಿವೆ.
ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್‌ನಲ್ಲಿ ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಭಾವಂತ ಕಲಾವಿದರ ಮತ್ತು ಪ್ರಖ್ಯಾತ ಕಲಾ, ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಯುವ ಉತ್ಸವ, ನಗೆ ಹಬ್ಬ, ಸಂಗೀತ, ನೃತ್ಯ, ನಾಟಕ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಜ.28ರಂದು ಕರಾವಳಿ ಉತ್ಸವ ಮೈದಾನದ ಪಕ್ಕದಲ್ಲಿ ಪುರುಷರ ಮತ್ತು ಮಹಿಳೆಯರ ಜಿಲ್ಲಾಮಟ್ಟದ ಮುಕ್ತ ಹ್ಯಾಂಡ್ ಬಾಲ್, ಬಾಕ್ಸಿ ಪಂದ್ಯಾವಳಿ, ವಿಕಲಚೇತನರ ಕ್ರೀಡಾಕೂಟ, ಲಗೋರಿ ಪಂದ್ಯಾಟ ನಡೆಯಲಿದೆ. ಜ.29 ರಂದು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಪುರುಷರ ಹಾಗೂ ಮಹಿಳೆಯರಿಗೆ ಮುಕ್ತ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ. ಶಾಲಾ ಕಾಲೇಜುಗಳ ಆಸಕ್ತ ಕ್ರೀಡಾ ಪಟುಗಳು ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಬೀಚ್ ಉತ್ಸವವು ಜನವರಿ 28ರಿಂದ 30 ರವರೆಗೆ ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ. ಪ್ರತೀ ದಿನ ಸಂಜೆ ಅನುಭವಿ ನೃತ್ಯ ತಂಡಗಳಿಂದ ಆಕರ್ಷಕ ನೃತ್ಯ ಸ್ಪರ್ಧೆ, ಸಂಗೀತ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಬೀಚ್ ವಾಲಿಬಾಲ್ ಪಂದ್ಯಾಟ, ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪಾಕೃತಿ ರಚನೆ, ಡ್ರಮ್ ಜಾಮ್ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ. ಆಕರ್ಷಕ ತಿಂಡಿ ತಿನಿಸುಗಳ ಆಹಾರೋತ್ಸವ ಕೂಡಾ ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ.
ಜ.22ರಿಂದ 24ರವರೆಗೆ ಕದ್ರಿ ಪಾರ್ಕ್‌ನಲ್ಲಿ ಮಂಗಳೂರಿನ ಇತಿಹಾಸ, ಪರಂಪರೆ ಸಾರುವ ಛಾಯಾ ಚಿತ್ರಗಳ ಪ್ರದರ್ಶನ ನಡೆಯಲಿದೆ. ಅಲ್ಲದೆ ಸ್ವಾತಂತ್ರ್ಯಪೂರ್ವ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆಗಳ ಕೃತಿಗಳ ಮಾಹಿತಿ ಮತ್ತು ಪ್ರದರ್ಶನ ಕೂಡಾ ಇರಲಿದೆ.
ಜ.30ರಂದು ಸಂಜೆ 5 ಗಂಟೆಗೆ ಕರಾವಳಿ ಉತ್ಸವ ಸಮಾರೋಪವು ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ. ಬಳಿಕ ಖ್ಯಾತ ಸಂಗೀತಗಾರ ಮಣಿಕಾಂತ್ ಕದ್ರಿ ಲೈವ್ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.