ಕಿದು ಫಾರ್ಮ್ ಮುಚ್ಚದಂತೆ ಆಗ್ರಹಿಸಿ ಮಾಜಿ ಸಚಿವ ರೈ ಮನವಿ

ಮಂಗಳೂರು, ಡಿ.19: ಅಂತರಾಷ್ಟ್ರೀಯ ತೆಂಗು ಜೀನ್ ಬ್ಯಾಂಕ್ ಹೊಂದಿರುವ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ಸಿಪಿಸಿಆರ್‌ಐ ಕಿದು ಫಾರ್ಮ್ (ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ) ಅನ್ನು ಯಾವುದೇ ಕಾರ್ಣಕ್ಕೂ ಮುಚ್ಚುಗಡೆ ಮಾಡಬಾರದೆಂದು ಮಾಜಿ ಸಚಿವ ರಮಾನಾಥ ರೈ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.
ಕಿದು ಫಾರ್ಮ್ ಮುಚ್ಚುಗಡೆಗೆ ಪರಿಶೀಲನಾ ಸಮಿತಿ ಮಾಡಿರುವ ಶಿಫಾರಸನ್ನು ಹಿಂದಕ್ಕೆ ತೆಗೆದುಕೊಂಡು ಅಂತಾರಾಷ್ಟ್ರೀಯ ಮಹತ್ವ ಹೊಂದಿರುವ ಜೀನ್ ಸೆಂಟರನ್ನು ಉಳಿಸಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಏಷ್ಯಾದ ತೆಂಗು ವಂಶಾಭಿವೃದ್ಧಿ ಬ್ಯಾಂಕ್ ಆಗಿರುವ ಕಿದು ಫಾರ್ಮ್ ಕಳೆದ ಐದು ವರ್ಷಗಳಿಂದ 4.6 ಕೋ.ರೂ. ಆದಾಯ ಗಳಿಸಿವೆ. ಅರಣ್ಯ ಇಲಾಖೆ 300 ಎಕ್ರೆ ಮೀಸಲು ಅರಣ್ಯ ಭೂಮಿಯನ್ನು ಅಡಿಕೆ, ತೆಂಗು ಮತ್ತು ಕೊಕ್ಕೋ ಗಿಡ ಬೆಳೆಸಿ, ಸಂಶೋಧನೆಗಾಗಿ ನೀಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭ ಸಂಸದ ಧ್ರುವನಾರಾಯಣ್ ಉಪಸ್ಥಿತರಿದ್ದರು.
Next Story