ಕೊಹ್ಲಿ ವಿರುದ್ಧ ಮಿಚೆಲ್ ಜಾನ್ಸನ್ ಕಿಡಿ

ಪರ್ತ್, ಡಿ.19: ಪರ್ತ್ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯದ ನಾಯಕ ಟಿಮ್ ಪೈನ್ ಅವರೊಂದಿಗೆ ಭಾರತದ ನಾಯಕ ವಿರಾಟ್ ಕೊಹ್ಲಿ ವರ್ತನೆಯನ್ನು ಉಲ್ಲೇಖಿಸಿ ಆಸೀಸ್‌ನ ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಬುಧವಾರ ಕಿಡಿಕಾರಿದರು. ಎರಡನೇ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಹಾಗೂ ಪೈನ್ ವಾಕ್ಸಮರ ನಡೆಸಿದ್ದು ಒಂದು ಹಂತದಲ್ಲಿ ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕೊಹ್ಲಿ ಅವರು ಪೈನ್ ಅವರನ್ನು ‘ಹಂಗಾಮಿ ನಾಯಕ’ಎಂದು ಕೀಳಾಗಿ ಕರೆದಿದ್ದಾಗಿ ವರದಿಯಾಗಿದೆ. ಆದರೆ, ಭಾರತದ ಟೀಮ್ ಮ್ಯಾನೇಜ್‌ಮೆಂಟ್ ಇದನ್ನು ಅಲ್ಲಗಳೆದಿದೆ. ‘‘ಪಂದ್ಯ ಕೊನೆಗೊಂಡ ಬಳಿಕ ಎರಡೂ ತಂಡಗಳ ನಾಯಕರು ಪರಸ್ಪರ ಮುಖಾಮುಖಿಯಾಗಬೇಕು. ಕೈಕುಲುಕಬೇಕಾಗುತ್ತದೆ. ಕೊಹ್ಲಿ ಅವರು ಟಿಮ್ ಪೈನ್ ಅವರ ಕೈಕುಲುಕಿದ್ದರು. ಆಗ ಕೊಹ್ಲಿ, ಪೈನ್ ಮುಖವನ್ನು ನೋಡದೇ ತೆರಳಿದರು. ನನ್ನ ಪ್ರಕಾರ ಇದು ಅವರು ಎದುರಾಳಿ ನಾಯಕನಿಗೆ ತೋರಿದ ಅಗೌರವ ಹಾಗೂ ಕ್ಷುಲ್ಲಕ ವರ್ತನೆಯಾಗಿದೆ’’ ಎಂದು ಫೋರ್ಕ್ ಸ್ಪೋರ್ಟ್ಸ್‌ಗೆ ಬರೆದ ಅಂಕಣಬರಹದಲ್ಲಿ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ 2ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 123 ರನ್ ಗಳಿಸಿ ಪೀಟರ್ ಹ್ಯಾಂಡ್ಸ್‌ಕಾಂಬ್‌ಗೆ ವಿಕೆಟ್ ಒಪ್ಪಿಸಿ ವಾಪಸಾಗುತ್ತಿದ್ದ ವೇಳೆ ಪ್ರೇಕ್ಷಕರ ಗೌರವವನ್ನು ಸ್ವೀಕರಿಸದೇ ತೆರಳಿದರು ಎಂದು ಆರೋಪಿಸಿದ ಜಾನ್ಸನ್,‘‘ಅದೊಂದು ವಿವಾದಾತ್ಮಕ ಕ್ಯಾಚ್ ಆಗಿದ್ದರೂ ಆಟಗಾರನಾದವನು ಪ್ರೇಕ್ಷಕರ ಪ್ರತಿಕ್ರಿಯೆ ಸ್ವೀಕರಿಸಬೇಕು. ಶತಕ ಗಳಿಸಿದ್ದಾಗ ಪ್ರೇಕ್ಷಕರು ಎದ್ದುನಿಂತು ಗೌರವ ನೀಡಿದಾಗ ಕೊಹ್ಲಿ ಯಾವ ಪ್ರತಿಕ್ರಿಯೆ ನೀಡದೇ ತೆರಳಿದ್ದರು’’ ಎಂದರು.
ಜಾನ್ಸನ್ ಹಾಗೂ ಕೊಹ್ಲಿ ನಡುವೆ ಈ ಹಿಂದೆ ವಾಗ್ವಾದ ನಡೆದಿತ್ತು. 2014ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಟೆಸ್ಟ್ ನ ವೇಳೆ ಜಾನ್ಸನ್ ರನೌಟ್ ಮಾಡಲು ಎಸೆದಿದ್ದ ಚೆಂಡು ಕೊಹ್ಲಿಗೆ ತಾಗಿತ್ತು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.







