ಒಂದೇ ದಿನದಲ್ಲಿ ಕೋಟ್ಯಧೀಶನಾದ ಬಂಗಾಳದ ಕಿರಿಯ ಆಟಗಾರ ಪ್ರಯಾಸ್

ಕೋಲ್ಕತಾ, ಡಿ.19: ಬಂಗಾಳದ 16ರ ಹರೆಯದ ಪ್ರಯಾಸ್ ರಾಯ್ ಬರ್ಮನ್‌ಗೆ ಡಿ.18 ನಿಜವಾಗಿಯೂ ಅದೃಷ್ಟದ ದಿನ. ಜೈಪುರದಲ್ಲಿ ಮಂಗಳವಾರ ನಡೆದ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ 20 ಲಕ್ಷ ರೂ.ಮೂಲ ಬೆಲೆ ಹೊಂದಿದ್ದ ಯುವ ಲೆಗ್ ಸ್ಪಿನ್ನರ್ ಬರ್ಮನ್‌ರನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ)1.5 ಕೋ.ರೂ.ಗೆ ಖರೀದಿಸಿತು. ಬರ್ಮನ್ ಒಂದೇ ದಿನದಲ್ಲಿ ಕೋಟ್ಯಧೀಶನಾಗಿದ್ದಾರೆ.
ಅಕ್ಟೋಬರ್ 25 ರಂದು 16ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬರ್ಮನ್ ತನ್ನ ಕನಸು ಈಡೇರಿತು ಎಂದು ಹೇಳಿದ್ದಾರೆ.
‘‘ನಾನು ಟಿವಿಯಲ್ಲಿ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸುತ್ತಿದ್ದೆ. ಸ್ಟಾರ್ ಆಟಗಾರರು ಹರಾಜಾಗದೇ ಇರುವಾಗ ನಾನು ಆಯ್ಕೆಯಾಗುತ್ತೇನೆಂದು ನಿರೀಕ್ಷಿಸಿಯೇ ಇರಲಿಲ್ಲ. ನನ್ನ ಪಾಲಿಗೆ ಕನಸು ನನಸಾಗಿದೆ. ವಿಶ್ವ ಶ್ರೇಷ್ಠ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ನನಗೆೆ ಒದಗಿಬಂದಿದೆ’’ಎಂದು ಬರ್ಮನ್ ಹೇಳಿದ್ದಾರೆ.
ನಿಜವಾದ ಸವಾಲು ಈಗ ಆರಂಭವಾಗಿದೆ ಎಂದ ನಂಬಿರುವ ಪ್ರಯಾಸ್,‘‘ ಆಟಗಾರರ ಹರಾಜಿನಲ್ಲಿ ದೊಡ್ಡ ಮೊತ್ತದಲ್ಲಿ ಹರಾಜಾದ ಆಟಗಾರರಿಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂಬ ಅರಿವು ನನಗಿದೆ. ಐಪಿಎಲ್ ಕ್ರಿಕೆಟ್ ಸ್ಥಾನಮಾನವನ್ನು ಮೀರಿ ಪ್ರದರ್ಶನ ನೀಡುವತ್ತ ಗಮನ ನೀಡುವೆ. ನಾನು ಸ್ಥಾನ ಕಳೆದುಕೊಳ್ಳಲು ಬಯಸಲಾರೆ’’ ಎಂದರು.
ಈ ವರ್ಷಾರಂಭದಲ್ಲಿ ಚೆನ್ನೈನಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಬಂಗಾಳದ ಪರ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಪ್ರಯಾಸ್ ಎಂಬ ಪ್ರತಿಭೆ ಬೆಳಕಿಗೆ ಬಂದಿತ್ತು. ಸೀನಿಯರ್ ಬಂಗಾಳ ತಂಡದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲೇ ಜಮ್ಮು-ಕಾಶ್ಮೀರದ ವಿರುದ್ಧ 5 ಓವರ್‌ಗಳಲ್ಲಿ 20 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಬಂಗಾಳಕ್ಕೆ ಆರು ವಿಕೆಟ್ ಗೆಲುವು ತಂದುಕೊಟ್ಟಿದ್ದರು.
ಟೂರ್ನಮೆಂಟ್‌ನಲ್ಲಿ ಒಟ್ಟು 11 ವಿಕೆಟ್‌ಗಳನ್ನು ಪಡೆದಿದ್ದರು. ಈ ಸಾಧನೆಯ ಮೂಲಕ ರಣಜಿ ಟ್ರೋಫಿ ತಂಡದಲ್ಲೂ ಸ್ಥಾನ ಪಡೆದಿದ್ದರು. ಪ್ರಯಾಸ್ ರಣಜಿ ಅಥವಾ ಟಿ-20(ಸಯ್ಯದ್ ಮುಶ್ತಾಕ್ ಅಲಿ)ಯಲ್ಲಿ ಇನ್ನಷ್ಟೇ ಆಡಬೇಕಾಗಿದೆ.
ದುರ್ಗಾಪುರದ ಬಾಲಕ ಪ್ರಯಾಸ್ ಬಂಗಾಳದ ಅಂಡರ್-23 ತಂಡ ಕಳೆದ ವರ್ಷ ರನ್ನರ್ಸ್ ಅಪ್ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. ಕಳೆದ ತಿಂಗಳು ನಡೆದ ಅಂಡರ್-19 ಚಾಲೆಂಜರ್ ಟೂರ್ನಿಯಲ್ಲಿ ಪ್ರಯಾಸ್, ಇಂಡಿಯಾ ಯೆಲ್ಲೊ ತಂಡವನ್ನು ಪ್ರತಿನಿಧಿಸಿದ್ದರು.







