ಸಮಾಜದಲ್ಲಿ ಮಾನವೀಯತೆ, ಪರಸ್ಪರ ಪ್ರೀತಿ, ಶಾಂತಿ ನೆಲಸುವಂತಾಗಲಿ: ಅತೀ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನಾ
ಮಂಗಳೂರು ಬಿಷಪ್‌ರಿಂದ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು

ಮಂಗಳೂರು.ಡಿ.19: ದೇವರು ಮತ್ತು ಮಾನವತೆಯ ಸಮಾಗಮವೇ ಕ್ರಿಸ್ ಮಸ್ ಹಬ್ಬದ ಸಾರ. ಕ್ರಿಸ್ ಮಸ್ ಹಬ್ಬ ಮಾನವೀಯತೆ, ಪರಸ್ಪರ ಪ್ರೀತಿ, ಬಂಧುತ್ವ, ಶಾಂತಿ ಎಲ್ಲರ ನಡುವೆ ನೆಲಸುವಂತಾಗಲಿ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಅತೀ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಕ್ರಿಸ್ ಮಸ್ ಹಬ್ಬದ ಮುಂಚಿತವಾಗಿ ಶುಭ ಕೋರಿದ್ದಾರೆ.
ನಗರದ ಕೊಡಿಯಾಲ ಬೈಲ್‌ನ ಬಿಷಪ್ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಹಮ್ಮಿಕೊಂಡ ಸಮಾರಂಭದಲ್ಲಿಂದು ಕ್ರಿಸ್ ಮಸ್ ಹಬ್ಬದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ಮಾನವರನ್ನು ದೈವತ್ವದ ಕಡೆಗೆ ಮೇಲೆತ್ತಲು ದೇವರೆ ಮಾನವನಾಗಿ ಜನಿಸಿದ ಘಟನೆಯನ್ನು ಕ್ರಿಸ್‌ಮಸ್ ಹಬ್ಬವೆಂದು ನಾವು ನಂಬುತ್ತೇವೆ. ಏಸು ಸ್ವಾಮಿ ಬಡವರ ಗೋದಲಿಯ ಮೇಲೆ ಜನಿಸಿ ತಮ್ಮನ್ನೆ ಈ ಮನುಕುಲಕ್ಕೆ ಕೊಡುಗೆಯಾಗಿ ನೀಡಿದ ದಿನವನ್ನು ಕ್ರಿಸ್ಮಸ್ ಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಬಿಷಪ್ ತಿಳಿಸಿದ್ದಾರೆ.
ಎಲ್ಲಾ ಚರ್ಚ್‌ಗಳಲ್ಲಿ ಸೌಹಾರ್ದ ಸಭೆ: ಪ್ರಕೃತಿ ನಮ್ಮೆಲ್ಲರ ಮನೆ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಜೊತೆಗೆ ಮಾನವ ಸಮುದಾಯದ ನಡುವೆ ಪರಸ್ಪರ ಪ್ರೀತಿ, ವಿಶ್ವಾಸವನ್ನೊಳಗೊಂಡ ಶಾಂತಿ ಸೌಹಾರ್ದತೆಯ ಸಂಬಂಧ ಸದಾ ನೆಲೆಸಿರಬೇಕು. ಈ ಹಿನ್ನೆಲೆಯಲ್ಲಿ ಧರ್ಮಪ್ರಾಂತ್ಯದ ಎಲ್ಲಾ 124 ಇಗರ್ಜಿಗಳಲ್ಲೂ ಈ ಬಾರಿ ಎಲ್ಲರೊಂದಿಗೆ ಸೇರಿಕೊಂಡು ಸೌಹಾರ್ದ ಕ್ರಿಸ್‌ಮಸ್ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಚರ್ಚ್‌ಗಳಲ್ಲೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಷಪ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಶ್ರೇಷ್ಠ ವಂ.ಮ್ಯಾಕ್ಸಿಂ ನರೋನ್ಹಾ, ಚ್ಯಾನ್ಸಲರ್ ವಂ.ವಿಕ್ಟರ್ ಜಾರ್ಜ್ ಡಿ ಸೋಜ, ಸಾರ್ವಜನಿಕ ಸಂಪಕಾಧಿಕಾರಿಗಳಾದ ವಂ.ವಿಕ್ಟರ್ ವಿಜಯ್ ಲೋಬೊ, ಮಾರ್ಸೆಲ್ ಮೊಂತೆರೋ, ಪಾಲನಾ ಮಂಡಳಿಯ ಕಾರ್ಯದರ್ಶಿ ಮೆಲ್ವಿನ್ ನರೋನ್ಹಾ ಮೊದಲಾದವರು ಉಪಸ್ಥಿತರಿದ್ದರು.