ದಾಖಲೆಯ 5ನೇ ಬಾರಿ ಮೆಸ್ಸಿಗೆ ಚಿನ್ನದ ಬೂಟ್

ಬಾರ್ಸಿಲೋನ, ಡಿ.19: ಅರ್ಜೆಂಟೀನದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಮಂಗಳವಾರ ದಾಖಲೆಯ 5ನೇ ಬಾರಿಗೆ ಚಿನ್ನದ ಬೂಟು ಪ್ರಶಸ್ತಿಯನ್ನು ಪಡೆದಿದ್ದಾರೆ. ಯುರೋಪ್‌ನಲ್ಲಿ ಕಳೆದ ಋತುವಿನಲ್ಲಿ ಗರಿಷ್ಠ ಗೋಲು ಗಳಿಸಿದ ಕಾರಣ ಮೆಸ್ಸಿಗೆ ಈ ಪ್ರಶಸ್ತಿ ಸಂದಿದೆ. ಬಾರ್ಸಿಲೋನ ಪರ 68 ಪಂದ್ಯಗಳಿಂದ 34 ಗೋಲುಗಳನ್ನು ಗಳಿಸಿರುವ ಮೆಸ್ಸಿ, ಲಿವರ್‌ಪೂಲ್ ತಂಡದ ಮುಹಮ್ಮದ್ ಸಲಾಹ್ ಹಾಗೂ ಟೊಟ್ಟೆನ್‌ಹ್ಯಾಮ್‌ನ ಹ್ಯಾರಿ ಕೇನ್‌ರನ್ನು ಹಿಂದಿಕ್ಕಿದ್ದಾರೆ. ರಿಯಲ್ ಮ್ಯಾಡ್ರಿಡ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ 4 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ. ರೊನಾಲ್ಡೊ ಈ ಋತುವಿನಲ್ಲಿ ಆಡಿದ 52 ಪಂದ್ಯಗಳಿಂದ 26 ಗೋಲುಗಳನ್ನು ಬಾರಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೆಸ್ಸಿ, ‘‘ನಾನು ಆಟ ಆರಂಭಿಸಿದಾಗ ಈ ರೀತಿ ಸಾಧನೆ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ವೃತ್ತಿಪರ ಫುಟ್ಬಾಲ್ ಆಡುವ ಹಾಗೂ ಯಶಸ್ಸು ಆಸ್ವಾದಿಸುವ ಕನಸು ಕಂಡಿದ್ದೆ. ನಾನು ಆಟವನ್ನು ಪ್ರೀತಿಸುತ್ತೇನೆ. ನನ್ನ ಪ್ರಯತ್ನಕ್ಕೆ ಸಂತಸಪಡುತ್ತೇನೆ, ನಾನು ಜಗತ್ತಿನ ಅತ್ಯುತ್ತಮ ತಂಡದಲ್ಲಿದ್ದು, ಶ್ರೇಷ್ಠ ಸಹ ಆಟಗಾರರೊಂದಿಗೆ ಆಡುತ್ತೇನೆ, ಹಾಗಾಗಿ ಪ್ರತಿಯೊಂದು ಸಾಧನೆ ಸುಲಭವಾಗಿದೆ’’ ಎಂದು ಹೇಳಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾರ್ಸಿಲೋನ ಅಧ್ಯಕ್ಷ ಜೋಸೆಫ್ ಮಾರಿಯಾ ಬಾರ್ಟೊಮ್ಯು ಹಾಗೂ ಮೆಸ್ಸಿಯ ಸಹ ಆಟಗಾರರಾದ ಸೆರ್ಜಿಯೊ ಬಸ್ಕೆಟ್ಸ್ ಹಾಗೂ ಸೆರ್ಜಿ ರಾಬರ್ಟೊ ಉಪಸ್ಥಿತರಿದ್ದರು.







