ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆ: ಇಂದು ಆಕಾಂಕ್ಷಿಗಳ ಸಂದರ್ಶನ
ಮುಂಬೈ, ಡಿ.19: ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ಯಾರಿ ಕರ್ಸ್ಟನ್, ಹರ್ಷಲ್ ಗಿಬ್ಸ್, ರಮೇಶ್ ಪೊವಾರ್ ಸೇರಿದಂತೆ ಹಲವರು ಗುರುವಾರ ಬಿಸಿಸಿಐ ತಜ್ಞರ ಆಯ್ಕೆ ಸಮಿತಿ ಎದುರು ಸಂದರ್ಶನಕ್ಕೆ ಹಾಜರಾಗಲಿದ್ದಾರೆ.
ಅರ್ಜಿ ಸಲ್ಲಿಸಿದವರಲ್ಲಿ 28 ಮಂದಿ ಮಾತ್ರ ಸಂದರ್ಶನಕ್ಕೆ ಆಯ್ಕೆಯಾಗಿದ್ದು, ಅವರಲ್ಲಿ ಪ್ರಮುಖವಾಗಿ ಡಬ್ಲು.ವಿ. ರಾಮನ್, ವೆಂಕಟೇಶ್ ಪ್ರಸಾದ್, ಮನೋಜ್ ಪ್ರಭಾಕರ್, ಟ್ರೆಂಟ್ ಜಾನ್ಸನ್, ಮಾರ್ಕ್ ಕೋಲ್ಸ್, ಡಿಮಿಟ್ರಿ ಮಸ್ಕರೆನ್ಹಸ್ ಹಾಗೂ ಬ್ರಾಡ್ ಹಾಗ್ ಸೇರಿದ್ದಾರೆ. ಭಾರತ ತಂಡದ ಮಾಜಿ ಆಟಗಾರರಾದ ಕಪಿಲ್ ದೇವ್, ಅಂಶುಮನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ತಜ್ಞರ ತಂಡ ಅರ್ಜಿದಾರರನ್ನು ಸಂದರ್ಶಿಸಲಿದೆ. ಬಹುತೇಕ ವಿದೇಶಿ ಆಕಾಂಕ್ಷಿಗಳು ತಮ್ಮ ಸಂದರ್ಶನವನ್ನು ವಿಡಿಯೋ ಕಾನ್ಫರೆನ್ಸ್ ವುೂಲಕ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಪೊವಾರ್ ಸೇರಿದಂತೆ ಸ್ಥಳೀಯರು ಸ್ವತಃ ಸಂದರ್ಶನಕ್ಕೆ ಹಾಜರಾಗಲಿದ್ದಾರೆ.
Next Story





