ಬುಲ್ಸ್-ಪೈರೇಟ್ಸ್ ಪಂದ್ಯ ರೋಚಕ ಟೈ
ಪ್ರೊ ಕಬಡ್ಡಿ ಲೀಗ್
ಪಂಚಕುಲ, ಡಿ.19: ಕೊನೆಯವರೆಗೆ ಹಾವು-ಏಣಿಯಾಟ ದಂತೆ ಕಂಡುಬಂದ ಬೆಂಗಳೂರು-ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ನಡುವಿನ ‘ಬಿ’ ಗುಂಪಿನ ಪ್ರೊ ಕಬಡ್ಡಿ ಪಂದ್ಯ 40-40 ಅಂಕಗಳಿಂದ ರೋಚಕ ಟೈನಲ್ಲಿ ಮುಕ್ತಾಯಗೊಂಡಿತು. ಇದರೊಂದಿಗೆ ಪ್ಲೇ ಆಫ್ ಸುತ್ತಿಗೇರುವ ಪಾಟ್ನಾ ಪೈರೇಟ್ಸ್ ಆಸೆ ಜೀವಂತವಾಗಿದೆ.
ಇಲ್ಲಿಯ ತವು ದೇವಿಲಾಲ್ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪರ ರೈಡರ್ ರೋಹಿತ್‌ಕುಮಾರ್ ಅತ್ಯಧಿಕ 16 ಅಂಕಗಳನ್ನು ಸಂಪಾದಿಸಿದರೆ ಪವನ್‌ಕುಮಾರ್ 8 ಹಾಗೂ ಮಹೇಂದರ್ ಸಿಂಗ್ 6 ಅಂಕಗಳನ್ನು ಗಳಿಸಿದರು. ಬುಲ್ಸ್‌ಗೆ ತೀವ್ರ ಪೈಪೋಟಿ ನೀಡಿದ ಪಾಟ್ನಾ ಪೈರೇಟ್ಸ್ ಪರ ಪರ್ದೀಪ್ ನರ್ವಾಲ್ ಅತ್ಯಧಿಕ 17 ಅಂಕಗಳನ್ನು ಗಳಿಸಿದರು. ವಿಜಯ್ 5 ಹಾಗೂ ವಿಕಾಸ್ ಜಗ್ಲಾನ್ 4 ಅಂಕ ಗಳಿಸಿ ಪರ್ದೀಪ್‌ಗೆ ಉತ್ತಮ ಸಾಥ್ ನೀಡಿದರು.
►ಫೋರ್ಚುನ್‌ಗೆ ಜಯ: ಇದೇ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಫೋರ್ಚುನ್‌ಜೈಂಟ್ಸ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್‌ನ್ನು 33-31 ಅಂಕಗಳ ಅಂತರದಿಂದ ಮಣಿಸಿತು. ವಿಜೇತ ತಂಡದ ಪರ ಕೆ.ಪ್ರಪಂಜನ್ ಅತ್ಯಧಿಕ 11 ಅಂಕಗಳನ್ನು ಗಳಿಸಿದರೆ, ಸಚಿನ್ 8 ಅಂಕ ಗಳಿಸಿದರು. ಪರಾಜಿತ ಪಿಂಕ್ ಪ್ಯಾಂಥರ್ಸ್ ಪರ ಅಜಿಂಕ್ಯ ಪವಾರ್ 9, ಸಂದೀಪ್ ಧುಲ್ 6 ಹಾಗೂ ದೀಪಕ್ ಹೂಡ 4 ಅಂಕ ಗಳಿಸಿದರು.





