ಬಿಸಿಸಿಐ ಕಾನೂನು ಹೋರಾಟದ ವೆಚ್ಚ ಭರಿಸಲು ಪಿಸಿಬಿಗೆ ವಿವಾದ ಇತ್ಯರ್ಥ ಸಮಿತಿ ನಿರ್ದೇಶನ
ದುಬೈ,ಡಿ.19: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಕಾನೂನು ಹೋರಾಟಕ್ಕೆ ವ್ಯಯಿಸಿದ್ದ ಖರ್ಚಿನ ಶೇ. 60ರಷ್ಟನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಭರಿಸಬೇಕು ಎಂದು ಐಸಿಸಿಯಿಂದ ನೇಮಿಲ್ಪಟ್ಟಿರುವ ವಿವಾದ ಇತ್ಯರ್ಥ ಸಮಿತಿ ಬುಧವಾರ ಆದೇಶಿಸಿದೆ.
ಭಾರತ ಉಭಯ ದೇಶಗಳ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಒಪ್ಪಂದದಂತೆ 2015 ಹಾಗೂ 2023ರ ನಡುವೆ ಆರು ದ್ವಿಪಕ್ಷೀಯ ಸರಣಿಗಳನ್ನು ಆಡಬೇಕಿತ್ತು. ಆದರೆ, ಭಾರತ ಒಪ್ಪಂದವನ್ನು ಉಲ್ಲಂಘಿಸಿರುವ ಕಾರಣ ತನಗೆ ಭಾರೀ ನಷ್ಟವಾಗಿದ್ದು, ಬಿಸಿಸಿಐಯಿಂದ 447 ಕೋ.ರೂ. ಪರಿಹಾರ ಕೊಡಿಸಬೇಕೆಂದು ಕೋರಿ ಕಳೆದ ತಿಂಗಳು ಪಿಸಿಬಿ, ಐಸಿಸಿ ವಿವಾದ ಇತ್ಯರ್ಥ ಮಂಡಳಿಯ ಮೊರೆ ಹೋಗಿತ್ತು. ಆದರೆ, ಸಮಿತಿಯು ಪಿಸಿಬಿಯ ಮನವಿಯನ್ನು ತಿರಸ್ಕರಿಸಿತ್ತು.
ಕಾನೂನು ಪ್ರಕ್ರಿಯೆ ವೇಳೆ ತನಗೆ ಸಾಕಷ್ಟು ಖರ್ಚುವೆಚ್ಚವಾಗಿದ್ದು, ಪಿಸಿಬಿಯಿಂದ ಇದನ್ನು ಭರಿಸಬೇಕೆಂದು ಬಿಸಿಸಿಐ ಪ್ರತಿಯಾಗಿ ಮತ್ತೊಂದು ದೂರು ದಾಖಲಿಸಿತ್ತು. ಪಾಕ್‌ನ ಪರಿಹಾರ ಬೇಡಿಕೆಯನ್ನು ತಿರಸ್ಕರಿಸಿದ ಒಂದು ತಿಂಗಳ ಬಳಿಕ ವಿವಾದ ಇತ್ಯರ್ಥ ಮಂಡಳಿಯು ಬಿಸಿಸಿಐ ಕಾನೂನು ಪ್ರಕ್ರಿಯೆಗೆ ಮಾಡಿರುವ ವೆಚ್ಚವನ್ನು ಭರಿಸುವಂತೆ ಪಿಸಿಬಿಗೆ ಆದೇಶಿಸಿದೆ. ‘‘ಪಿಸಿಬಿಯು ಬಿಸಿಸಿಐನ ಶೇ.60ರಷ್ಟು ಕಾನೂನು ವೆಚ್ಚ; ಆಡಳಿತಾತ್ಮಕ ವೆಚ್ಚ ಹಾಗೂ ವಿವಾದ ಇತ್ಯರ್ಥ ಸಮಿತಿಯ ವೆಚ್ಚವನ್ನು ಭರಿಸಬೇಕು’’ ಎಂದು ಐಸಿಸಿ ಸಮಿತಿಯು ತನ್ನ ಹೊಸ ತೀರ್ಪಿನಲ್ಲಿ ತಿಳಿಸಿದೆ. ಪಾಕ್‌ನೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಸರಣಿ ಒಪ್ಪಂದವನ್ನು ಉಲ್ಲಂಘಿಸಲಾಗಿಲ್ಲ. ಐಸಿಸಿಗೆ ಭಾರತ ಸಲಹೆ ನೀಡಿರುವ ಆದಾಯ ಮಾದರಿಗೆ ಬೆಂಬಲ ನೀಡುವ ಬದ್ಧತೆಗೆ ಪಾಕ್ ಗೌರವ ನೀಡಲು ವಿಫಲವಾಗಿದೆ’’ ಎಂದು ಬಿಸಿಸಿಐ ವಾದವಾಗಿತ್ತು. ಪಿಸಿಬಿ ತನಗೆ ಪರಿಹಾರ ನೀಡಬೇಕೆಂಬ ಬೇಡಿಕೆ ಇಟ್ಟಾಗ ಐಸಿಸಿ ಮೂವರು ಸದಸ್ಯರ ವಿವಾದ ಇತ್ಯರ್ಥ ಸಮಿತಿ(ಡಿಆರ್‌ಸಿ)ಯನ್ನು ನೇಮಕ ಮಾಡಿತ್ತು. ದುಬೈನಲ್ಲಿರುವ ಐಸಿಸಿ ಪ್ರಧಾನ ಕಚೇರಿಯಲ್ಲಿ ಅ.1ರಿಂದ 3ರ ತನಕ ವಿಚಾರಣೆ ನಡೆದಿತ್ತು.
ಬಿಸಿಸಿಐ ಪರ ತೀರ್ಪು ನೀಡಿರುವ ಸಮಿತಿಯು, ಈ ತೀರ್ಪು ಅಂತಿಮ. ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದಿದೆ.







