ಕಾಸರಗೋಡಿನ ವಿದ್ಯಾ ನಗರದಲ್ಲಿ ಹುಬ್ಬಳ್ಳಿ ಮಹಿಳೆಯ ಕೊಲೆ

ಕಾಸರಗೋಡು, ಡಿ.20: ನಗರ ಹೊರವಲಯದ ವಿದ್ಯಾನಗರ ಚಾಲದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಕರ್ನಾಟಕ ಮೂಲದ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮೃತ ಮಹಿಳೆಯನ್ನು ಹುಬ್ಬಳ್ಳಿಯ ಸರಸು(30) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಚಂದ್ರ(35) ಎಂಬಾತ ನಾಪತ್ತೆಯಾಗಿದ್ದಾನೆ.
ಇವರಿಬ್ಬರು ಕೆಲ ವರ್ಷಗಳಿಂದ ವಿದ್ಯಾನಗರ ಚಾಲದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಚಂದ್ರ ಕಾಸರಗೋಡಿನಲ್ಲಿ ಇಂಟರ್ ಲಾಕ್ ಹಾಸುವ ಕೆಲಸ ಮಾಡುತ್ತಿದ್ದನು. ತಾನು ಊರಿಗೆ ತೆರಳುತ್ತಿದ್ದೇನೆ, ಎರಡು ದಿನ ಕಳೆದು ಬರುವುದಾಗಿ ಚಂದ್ರ ಮಂಗಳವಾರ ರೂಂನ ಕೀಲಿಕೈಯನ್ನು ಮನೆ ಮಾಲಕನಿಗೆ ನೀಡಿ ತೆರಳಿದನೆನ್ನಲಾಗಿದೆ. ಎರಡು ದಿನ ಕಳೆದರೂ ಚಂದ್ರ ಮರಳದಿರುವುದರಿಂದ ಸಂಪರ್ಕಿಸಿದಾಗ ಆತನ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತೆನ್ನಲಾಗಿದೆ. ಈ ನಡುವೆ ಇಂದು ಬೆಳಗ್ಗೆ ಮಾಲಕ ಚಂದ್ರನ ಕೋಣೆಯ ಬಾಗಿಲು ತೆರೆದಾಗ ಸರಸು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಫೋರೆನ್ಸಿಕ್ ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪರಾರಿಯಾಗಿರುವ ಚಂದ್ರನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.