ಬಿಜೆಪಿಯ ಮನೋಜ್ ತಿವಾರಿಯ 1 ಲಕ್ಷ ದೇಣಿಗೆ ಆಶ್ವಾಸನೆ ನೆನಪಿಸಿದ ಎಎಪಿ
ದಿಲ್ಲಿ ಮೆಟ್ರೋ 4ನೇ ಹಂತ ಯೋಜನೆಗೆ ಹಸಿರು ನಿಶಾನೆ

ಹೊಸದಿಲ್ಲಿ,ಡಿ.20 : ದಿಲ್ಲಿ ಮೆಟ್ರೋ ವಿಸ್ತರಣಾ ಯೋಜನೆಯ ನಾಲ್ಕನೇ ಹಂತಕ್ಕೆ ಅನುಮೋದನೆ ದೊರೆತರೆ ದಿಲ್ಲಿ ಸರಕಾರಕ್ಕೆ ರೂ. 1 ಲಕ್ಷ ದೇಣಿಗೆ ನೀಡುವುದಾಗಿ ಹೇಳಿದ್ದ ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಗೆ ಅವರ ಮಾತನ್ನು ಎಎಪಿ ನೆನಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯಂತೆ ತಿವಾರಿ ಕೂಡ ತಮ್ಮ ಆಶ್ವಾಸನೆಯಿಂದ ಹಿಂದೆ ಸರಿದು ಅದೊಂದು ಜುಮ್ಲಾ ಎಂದು ಹೇಳದೇ ಇರಲಿ ಎಂದು ಪಕ್ಷ ಆಶಿಸಿದೆ.
ಈ ಬಗ್ಗೆ ಎಎಪಿ ಟ್ವೀಟ್ ಕೂಡ ಮಾಡಿದ್ದು ತಿವಾರಿ "ಈ ಕೆಳಗಿನ ಲಿಂಕ್ ಒತ್ತಿ ಹಣ ದೇಣಿಗೆ ನೀಡಲಿ. ಈ ಮೂಲಕ ಆಶ್ವಾಸನೆ ಈಡೇರಿಸಿದಂತೆಯೂ ಆಗುವುದು ಡಿಜಿಟಲ್ ಇಂಡಿಯಾದ ಭಾಗವಾದಂತೆಯೂ ಆಗುವುದು,'' ಎಂದು ಅದರಲ್ಲಿ ಬರೆಯಲಾಗಿದೆ.
ಅಕ್ಟೋಬರ್ 18ರಂದು ಟ್ವೀಟ್ ಮಾಡಿದ್ದ ತಿವಾರಿ ಹೀಗೆ ಬರೆದಿದ್ದರು "ಅರವಿಂದ್ ಕೇಜ್ರಿವಾಲ್ಜೀ ನಿಮ್ಮನ್ನು ಆರಿಸಿದ ಜನರನ್ನು ಶಿಕ್ಷಿಸಬೇಡಿ. ಜನರು 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಕೇಜ್ರಿವಾಲ್ ಗೆ ನೀಡಿದ್ದಾರೆ ಆದರೆ ಅವರು ಮೆಟ್ರೋ ನೀಡುವುದಿಲ್ಲವೆನ್ನುತ್ತಿದ್ದಾರೆ. ನೀವು ಮೆಟ್ರೋ ನಾಲ್ಕನೇ ಹಂತಕ್ಕೆ ಅನುಮೋದನೆ ನೀಡಿದರೆ ನಾನು ಹಾಡುವ ಮೂಲಕ ಗಳಿಸುವ ರೂ. 1,11,100 ದೇಣಿಗೆ ನೀಡುತ್ತೇನೆ.''
ಎರಡು ವರ್ಷಗಳ ಕಾಲ ತೂಗುಯ್ಯಾಲೆಯಲ್ಲಿದ್ದ ಈ ಮೆಟ್ರೋ ನಾಲ್ಕನೇ ಹಂತದ ಯೋಜನೆಗೆ ಕೊನೆಗೂ ದಿಲ್ಲಿ ಸಚಿವ ಸಂಪುಟ ಬುಧವಾರದ ಸಭೆಯಲ್ಲಿ ಹಸಿರು ನಿಶಾನೆ ನೀಡಿತ್ತು.
ಯೋಜನೆ ಅನುಮೋದನೆ ವಿಳಂಬಕ್ಕಾಗಿ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿಯನ್ನು ದೂರಿದ್ದಾರೆ.