ರಂಗಭೂಮಿ, ಚಲನಚಿತ್ರ ನಟ ಬೈಕಾಡಿ ಸಂಜೀವ ಸಾಲ್ಯಾನ್ ನಿಧನ

ಉಡುಪಿ, ಡಿ.20: ತುಳು ರಂಗಭೂಮಿಯ ಹಿರಿಯ ಕಲಾವಿದ, ಚಿತ್ರನಟ, ಶನಿಕಥಾ ಪಾರಾಯಣದ ಅರ್ಥಧಾರಿ ಬೈಕಾಡಿ ಸಂಜೀವ ಸಾಲ್ಯಾನ್ (73) ಮಂಗಳವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಹವ್ಯಾಸಿ ರಂಗಭೂಮಿ ಕಲಾವಿದರಾಗಿ ನೂರಾರು ತುಳುನಾಟಕಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದ ಇವರು, ಕರಾವಳಿ ರಂಗಭೂಮಿಯಲ್ಲಿ ಅತೀ ಹೆಚ್ಚು ಪ್ರದರ್ಶನ ಕಂಡ ಪ್ರಸಿದ್ಧ ಬೈರನ ಬದ್‌ಕ್ ನಾಟಕದಲ್ಲಿ ಬೈರನ ಪಾತ್ರ, ಕರಿಯೆ ಕಟ್ಟಿನ ಕರಿಮಣಿ ನಾಟಕದ ಕರಿಯನ ಪಾತ್ರದಿಂದ ಪ್ರಸಿದ್ದಿ ಪಡೆದರು.
ಇವರು ತುಳುವಿನ ಕಡಲಮಗೆ, ಭಾಗ್ಯ, ಮಾರಿಬಲೆ ಮತ್ತು ಕನ್ನಡದ ಗುಲಾಬಿ ಟಾಕೀಸ್ ಚಿತ್ರದಲ್ಲೂ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು.
ಪಡುಕರೆ ಬೋಳ ಕಾಂಚನ್ ಶನಿಕಥಾ ಪಾರಾಯಣ ತಂಡದಲ್ಲಿ ಪ್ರಮುಖ ಅರ್ಥಧಾರಿಯಾಗಿದ್ದರು. ವೃತ್ತಿಯಲ್ಲಿ ಮತ್ಸ್ಯೋದ್ಯಮಿಯಾಗಿದ್ದ ಇವರು ಉದ್ಯಾವರ ಪಿತ್ರೋಡಿ ಹದಿನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘ, ಕುತ್ಪಾಡಿ ಪಡುಕರೆ ಮೊಗವೀರ ಮಹಾಜನ ಸಂಘ, ಪಡುಕರೆ ಯುವಕ ಮಂಡಲ, ಉಚ್ಚಿಲ ಮಹಾಲಕ್ಷ್ಮೆ ದೇವಸ್ಥಾನ ಕ್ಷೇತ್ರಾಡಳಿತ ಸಮಿತಿ, ಅಂಬಲ ಪಾಡಿ ಲಯನ್ಸ್ ಕ್ಲಬ್, ಎರ್ಮಾಳ್ ಬಡಾ ಸಾಲ್ಯಾನ್ ಮೂಲಸ್ಥಾನ, ಕಡೆಕಾರು ಬಬ್ಬುಸ್ವಾಮಿ ದೈವಸ್ಥಾನ ಮೊದಲಾದ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ದ್ದರು. ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಮಾಜಿ ಕಾರ್ಯದರ್ಶಿಯಾಗಿ ಯೂ ಸೇವೆ ಸಲ್ಲಿಸಿದ್ದರು.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.