ಸಾಲಿಹಾತ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ

ಉಡುಪಿ, ಡಿ.20: ಪಡುತೋನ್ಸೆ ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವು ಇತ್ತೀಚೆಗೆ ಜರಗಿತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಂತಾರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಡಾ. ಸಾಜಿದ್ ವಳಕಾಡು ಮಾತನಾಡಿ, ಕ್ರೀಡೆ ನಮ್ಮ ಸಾಮರ್ಥ್ಯದ ಪ್ರದರ್ಶನಕ್ಕೆ ವೇದಿಕೆಯಾಗುತ್ತದೆ. ಅಲ್ಲದೆ ಕ್ರೀಡೆಯು ನಮ್ಮಲ್ಲಿ ಶಿಸ್ತು ಕಲಿಸುತ್ತದೆ ಎಂದು ಹೇಳಿದರು.
ಧ್ವಜ ವಂದನೆ ಸ್ವೀಕರಿಸಿದ ಉಡುಪಿ ಜಿಲ್ಲಾ ದೈಹಿಕ ನಿರ್ದೇಶಕ ಮಧುಕರ್ ಮಾತನಾಡಿ, ಕ್ರೀಡೆ ಶಾಲಾ ಸಹಪಠ್ಯ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಸರಕಾರ ಕ್ರೀಡೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ವಹಿಸಿದ್ದರು. ಯುವ ಉದ್ಯಮಿ ಬೇಂಗ್ರೆ ಅಶ್ರಫ್, ಟ್ರಸ್ಟ್‌ನ ಉಪಾಧ್ಯಕ್ಷ ಇದ್ರಿಸ್ ಹೂಡೆ, ಕಾರ್ಯದರ್ಶಿ ಜಿ.ಇಮ್ತಿಯಾಝ್, ಎಸ್‌ಐಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರ್, ಹಿರಿಯ ಟ್ರಸ್ಟಿಗಳಾದ ಮೌಲಾನಾ ಆದಂ ಸಾಹೇಬ್, ಹುಸೇನ್ ಮಾಸ್ಟರ್, ಶಬ್ಬೀರ್ ಮಲ್ಪೆ, ಉಮ್ಮರ್ ಉಸ್ತಾದ್ ಮುಖ್ಯಅತಿಥಿಗಳಾಗಿದ್ದರು.
ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥ ಶಬಾನಾ ಮುಮ್ತಾಜ್, ಕುಲ್ಸುಮ್ ಅಬೂಬಕ್ಕರ್, ಸುನಂದಾ, ಲವೀನಾ ಕ್ಲಾರಾ, ಸಮೀನಾ ನಜೀರ್ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಸ್ವಾಗತಿಸಿ ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಬೀನಾ ವಂದಿಸಿದರು. ಸಹಶಿಕ್ಷಕಿ ಸುನೈನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.