ಬೆಳೆ ಸಾಲ ಮನ್ನಾ: ಬ್ಯಾಂಕುಗಳ ನಿಧಾನಪ್ರವೃತ್ತಿಗೆ ಡಿಸಿ ತರಾಟೆ
ಉಡುಪಿ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ

ಮಣಿಪಾಲ, ಡಿ.20: ಜಿಲ್ಲೆಯ ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ ಬೆಳೆ ಸಾಲವನ್ನು ರಾಜ್ಯ ಸರಕಾರ ಮನ್ನಾ (2ಲಕ್ಷ ರೂ.ವರೆಗೆ) ಮಾಡಿದ್ದು, ಇದಕ್ಕಾಗಿ ರೈತರ ಹೆಸರನ್ನು ನೊಂದಾಯಿಸಿಕೊಂಡು ದಾಖಲೆಗಳನ್ನು ಅಪ್‌ಲೋಡ್ ಮಾಡುವಲ್ಲಿ ಬ್ಯಾಂಕ್ ಅಧಿಕಾರಿಗಳು ತೋರುತ್ತಿರುವ ನಿರಾಸಕ್ತಿ ಹಾಗೂ ನಿಧಾನ ಪ್ರವೃತ್ತಿಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಉಡುಪಿ ಜಿಪಂನ ಮುಖ್ಯ ಕಾರ್ಯನಿವರ್ಹಣಾಧಿಕಾರಿ ಸಿಂಧು ಬಿ. ರೂಪೇಶ್ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ 235 ವಾಣಿಜ್ಯ ಬ್ಯಾಂಕ್ ಶಾಖೆಗಳಲ್ಲಿ ಒಟ್ಟು 4648 ರೈತರು ಬೆಳೆ ಸಾಲ ಪಡೆದಿದ್ದು, ಇವರು ತಮ್ಮ ಆಧಾರ ಕಾರ್ಡ್, ಪಡಿತರ ಚೀಟಿ, ಜಾಗದ ಸರ್ವೆ ನಂಬರಿನ ಮಾಹಿತಿಗಳನ್ನು ಸ್ವಯಂ ದೃಢೀಕರಿಸಿ ಸಾಲ ಪಡೆದ ಬ್ಯಾಂಕ್ ಶಾಖೆಗಳಿಗೆ ಸಲ್ಲಿಸಬೇಕಾಗಿದೆ. ರೈತರ ಹೆಸರನ್ನು ನೊಂದಾಯಿಸಿಕೊಂಡು ಅವರ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಡಿ.28ರವರೆಗೆ ಬ್ಯಾಂಕುಗಳಿಗೆ ಕಾಲಾವಕಾಶ ನೀಡಲಾಗಿದೆ.
ಆದರೆ ಈವರೆಗೆ ಕೇವಲ 1246 ರೈತರ ಹೆಸರುಗಳನ್ನು ನೊಂದಾಯಿಸಿ ಕೊಂಡು 436 ರೈತರ ದಾಖಲೆಗಳನ್ನು ಮಾತ್ರ ಅಪ್‌ಲೋಡ್ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದ ಜಿಲ್ಲಾಧಿಕಾರಿ, ಈ ಕುರಿತು ಮಾಹಿತಿ ಪಡೆಯಲು ಬ್ಯಾಂಕ್ ಶಾಖೆಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತಿಸಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ ಸಾಲಮನ್ನಾ ಪ್ರಕ್ರಿಯೆ ಪ್ರಾರಂಭಿಸಲು ರಾಜ್ಯ ಸರಕಾರ ಒತ್ತಡದಲ್ಲಿದೆ. ಜಿಲ್ಲೆಯಲ್ಲಿ ಬ್ಯಾಂಕುಗಳು ಇದಕ್ಕೆ ಯಾವುದೇ ಉತ್ಸಾಹ ತೋರಿಸುತಿಲ್ಲ. ಇದಕ್ಕೆ ಡಿ.28ರ ಗಡುವು ನೀಡಲಾಗಿದ್ದು, ಇನ್ನು ಐದು ದಿನ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇದೆ. ನೀವು ಈ ಗುರಿಯನ್ನು ಹೇಗೆ ಮುಟ್ಟುತ್ತೀರಿ ಎಂದವರು ವಿವಿಧ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿಮಗೆ ಸಮಸ್ಯೆಗಳಿದ್ದರೆ ತಿಳಿಸಿ. ಇದು ತುರ್ತು ಕಾರ್ಯ. ಇದರಲ್ಲಿ ಉದಾಸೀನತೆಯನ್ನು ತೋರಿಸಬೇಡಿ. ರಜಾ ದಿನದಂದು ಬಂದು ಕೆಲಸ ಮಾಡಿ. ಇಂಟರ್‌ನೆಟ್ ಸ್ಲೋ, ಸಂಪರ್ಕ ಸಿಗುತ್ತಿಲ್ಲ ಎಂಬ ಸಬೂಬು ಬೇಡ. ಗೂಗಲ್ ಕ್ರೋಮ್ ಬ್ರೌಸರ್‌ನಲ್ಲೇ ಅಪ್‌ಲೋಡ್ ಮಾಡಿ ಎಂದು ಅವರು ಸತತವಾಗಿ ಸಂಪರ್ಕಕ್ಕೆ ಸಿಗದ ನೂರಕ್ಕೂ ಅಧಿಕ ಬ್ಯಾಂಕ್ ಶಾಖೆಗಳ ಹೆಸರುಗಳನ್ನು ಓದಿ ಹೇಳಿದರು.
ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಠೇವಣಿ ಮೊತ್ತವು 2018ರ ಸೆಪ್ಟಂಬರ್ ಅಂತ್ಯದ ವೇಳೆಗೆ 23093 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.7.26 ಪ್ರಗತಿ ಸಾಧಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಆರ್‌ಎಂ ಸುಜಾತ ತಿಳಿಸಿದರು. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 12024 ಕೋಟಿ ಸಾಲ ನೀಡಲಾಗಿದ್ದು, ಶೇ.12.06 ಪ್ರಗತಿ ಸಾಧಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿಯ ಅುಪಾತ ಶೇ.52.07ರಷ್ಟಿದೆ ಎಂದರು.
2018-19ರಲ್ಲಿ ಜಿಲ್ಲೆಯ ಬ್ಯಾಂಕ್‌ಗಳು 8705.63ಕೋಟಿ ರೂ. ಸಾಲದ ಗುರಿಯನ್ನು ಹೊಂದಿದ್ದು, ಇದಲ್ಲಿ ಸೆ. ತಿಂಗಳ ಕೊನೆಯವರೆಗೆ 3456 ಕೋಟಿ ರೂ. ಸಾಲವನ್ನು ನೀಡುವ ಮೂಲಕ ಶೇ.39.70 ಸಾಧನೆ ಮಾಡಲಾಗಿದೆ ಎಂದರು.
ಈ ಸಾಲದಲ್ಲಿ ಕೃಷಿ ಕ್ಷೇತ್ರಗಳಿಗೆ 1302 ಕೋಟಿ ರೂ., ಮೈಕ್ರೋ, ಕಿರು, ಮಧ್ಯಮ ಉದ್ಯಮಗಳಿಗೆ 951ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 41ಕೋಟಿ ರೂ. ಹಾಗೂ ಗೃಹಸಾಲಕ್ಕೆ 181 ಕೋಟಿ ರೂ., ಇತರ ಆದ್ಯತಾ ಕ್ಷೇತ್ರಗಳಿಗೆ 415 ಕೋಟಿ ರೂ.ವನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಿಇಓ ಸಿಂಧು ಬಿ.ರೂಪೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರ್‌ಬಿಐ ಬೆಂಗಳೂರಿನ ಎಜಿಎಂ ಪಿ.ಕೆ.ಪಟ್ಟಾನಾಯಕ್, ನಬಾರ್ಡ್‌ನ ಎಜಿಎಂ ಎಸ್.ರಮೇಶ್ ಅವರು ಭಾಗವಹಿಸಿದ್ದರು. ಲೀಡ್‌ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ಡಿ.ಸಿ. ಅತಿಥಿಗಳನ್ನು ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ನಬಾರ್ಡ್ ಸಿದ್ಧಪಡಿಸಿದ ಉಡುಪಿ ಜಿಲ್ಲೆಯ 2019-20ನೇ ಸಾಲಿನ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿದರು.
ಶೈಕ್ಷಣಿಕ ಸಾಲ; ಸಿಇಓ ಆಕ್ಷೇಪ
ಇದಕ್ಕೆ ಮುನ್ನ ಶೈಕ್ಷಣಿಕ ಸಾಲ ನೀಡಿಕೆಯಲ್ಲಿ ಜಿಲ್ಲೆಯ ಬ್ಯಾಂಕುಗಳ ಕಳಪೆ ಸಾಧನೆಗೆ ಸಿಇಓ ಸಿಂಧು ಬಿ.ರೂಪೇಶ್ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಶಿಕ್ಷಣದಲ್ಲಿ ಮುಂದುವರಿದ ಜಿಲ್ಲೆಯಲ್ಲೂ ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಸಾಲ ಪಡೆಯುತ್ತಿಲ್ಲ ಎಂದರೆ ಅವರೆಲ್ಲರೂ ಸ್ವಂತ ಖರ್ಚಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಇತರ ವೃತ್ತಿಪರ ಶಿಕ್ಷಣ ಪಡೆಯುವಷ್ಟು ಶ್ರೀಮಂತರಿರಬೇಕು. ಅಥವಾ ಬ್ಯಾಂಕುಗಳು ಅವರ ಶಿಕ್ಷಣ ಸಾಲದ ಅರ್ಜಿಗಳನ್ನು ತಿರಸ್ಕರಿಸುತ್ತಿರಬೇಕು ಎಂದರು.
ಶಿಕ್ಷಣ ಸಾಲದಲ್ಲಿ ಜಿಲ್ಲೆಯ ಗುರಿಯಾದ 194.40 ಕೋಟಿ ರೂ.ಗಳಲ್ಲಿ ಸೆ.30ರವರೆಗೆ ಕೇವಲ 41 ಕೋಟಿ ರೂ.ಗಳನ್ನು (ಶೇ.21.09) ಮಾತ್ರ ಸಾಲದ ರೂಪದಲ್ಲಿ ನೀಡಲಾಗಿದೆ. ಉಡುಪಿಯಂಥ ಜಿಲ್ಲೆಯಲ್ಲಿ ಇದು ನಿಜವಾಗಿ ಆಶ್ಚರ್ಯದ ವಿಷಯ. ಬ್ಯಾಂಕುಗಳಿಗೆ ಶಿಕ್ಷಣ ಸಾಲಕ್ಕಾಗಿ ಬಂದಿರುವ ಅರ್ಜಿ ಹಾಗೂ ಅವುಗಳಲ್ಲಿ ಎಷ್ಟನ್ನು, ಯಾಕೆ ತಿರಸ್ಕರಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ಅವರು ಲೀಡ್‌ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ಡಿ.ಸಿ.ಗೆ ಸೂಚಿಸಿದರು.