ಅಂಬ್ಲಮೊಗರು: ನುಸ್ರತುಲ್ ಇಸ್ಲಾಂ ಸಮಿತಿಯ 40ನೇ ವಾರ್ಷಿಕೋತ್ಸವ

ಉಳ್ಳಾಲ, ಡಿ. 20: ಇಂದು ಸುಂದರ ಹೆಸರಿಟ್ಟುಕೊಂಡಿರುವವರು ಧರ್ಮಕ್ಕೆ ಸೇವೆ ಸಲ್ಲಿಸುವ ಬದಲು ಕಂಟಕರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಧಾರ್ಮಿಕ ಹೆಸರಿಟ್ಟುಕೊಂಡಿರುವ ಸಂಘಟಕರು ಜನರನ್ನು ಧರ್ಮದ ದಾರಿ ತೋರಿಸುವ ಕಾರ್ಯ ನಿರಂತರ ಹಮ್ಮಿಕೊಳ್ಳಬೇಕಿದೆ ಎಂದು ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ಅಭಿಪ್ರಾಯಪಟ್ಟರು.
ಅಂಬ್ಲಮೊಗರು ಗ್ರಾಮದ ಕುಂಡೂರು ಜುಮಾ ಮಸೀದಿಯ ಅಂಗಸಂಸ್ಥೆ ನುಸ್ರತುಲ್ ಇಸ್ಲಾಂ ಸಮಿತಿಯ 40ನೇ ವಾರ್ಷಿಕೋತ್ಸವ ಪ್ರಯುಕ್ತ ಮಸೀದಿಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಮರಣ ಸಂಚಿಕೆ `ನುಸ್ರತ್' ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಮನುಷ್ಯ ಪರಸ್ಪರ ನಿಂದನೆ ಮಾಡಿಕೊಂಡು ಜೀವನ ಸಾಗಿಸಬಹುದು, ಆದರೆ ಇಸ್ಲಾಂ ಧರ್ಮದಲ್ಲಿ ಎಲ್ಲೂ ನಿಂದನೆಗೆ ಅವಕಾಶವಿಲ್ಲ. ಇದನ್ನು ಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸಬೇಕಿದೆ. ಕಳೆದ 40 ವರ್ಷಗಳಿಂದ ನುಸ್ರತುಲ್ ಇಸ್ಲಾಂ ಸಮಿತಿ ಗ್ರಾಮದಲ್ಲಿ ಕಟ್ಟಕಡೆಯ ಜನರಿಗೂ ಅನುಕೂಲವಾಗು ವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿರಂತರ ಮುಂದುವರಿಯಲಿ ಎಂದು ಆಶಿಸಿದರು.
ಅಬುದಾಭಿ ಬ್ರಿಟಿಷ್ ಅಂತರಾಷ್ಟ್ರೀಯ ಶಾಲೆಯ ಪ್ರಾಧ್ಯಾಪಕ, ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಕ್ ಹುದವಿ `ಕುರಾನ್ ಕರೆಯುತ್ತಿದೆ ಒಳಿತಿನೆಡೆಗೆ' ವಿಷಯದಲ್ಲಿ ಮುಖ್ಯ ಭಾಷಣ ಮಾಡಿದರು. ಮಂಗಳೂರು ಕೇಂದ್ರ ಜುಮಾ ಮಸೀದಿ ಖತೀಬ್ ವಿ.ಕೆ.ಸ್ವದಕತ್ತುಲ್ಲಾ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಸ್ವಾಗತ್ ಅಧ್ಯಕ್ಷತೆ ವಹಿಸಿದ್ದರು. ಕುಂಡೂರು ಜುಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಯಮಾನಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಎನ್.ಎಸ್.ಕರೀಂ, ಅಬ್ದುಲ್ ರಹ್ಮಾನ್ ಕೋಡಿಜಾಲ್, ಅಬ್ದುಲ್ ರಹ್ಮಾನ್ ಎಲಿಯಾರ್, ಇಕ್ಬಾಲ್ ಸಾಮಾಣಿಗೆ, ಮೊಹಮ್ಮದ್ ಕೊಲಂಜಿಬೆಟ್ಟು, ಮೆಗಾ ಸಲೀಂ, ಮುಹಮ್ಮದ್ ದೋಟ, ಅಬೂಬಕ್ಕರ್, ಮುಸ್ತಫಾ ಫೈಝಿ, ರಿಯಾಝ್ ಫೈಝಿ, ಅಬ್ದುಲ್ ಲತೀಫ್ ಅನ್ಸಾರಿ, ಮುಹಮ್ಮದ್ ರಫೀಕ್ ಯಮಾನಿ, ಅಬ್ದುಲ್ ಲತೀಫ್ ಮೌಲವಿ, ಶಿಹಾಬುದ್ದೀನ್ ಅಝ್ಹರಿ, ಅಬ್ದುಲ್ ಲತೀಫ್ ಬದ್ರಿ ನ್ನಿತರರು ಉಪಸ್ಥಿತರಿದ್ದರು. ಅಸ್ಸಯ್ಯಿದ್ ಕೆ.ಎಸ್.ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ದುವಾ ಮಾಡಿದರು.
ನುಸ್ರತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ಎಸ್. ಮೊಹಮ್ಮದ್ ರಫೀಕ್ ಅಂಬ್ಲಮೊಗರು ಸ್ವಾಗತಿಸಿದರು. ಕಾರ್ಯದರ್ಶಿ ಸಲೀಂ ಅಲಿ ವಂದಿಸಿದರು.