ಇಂದಲ್ಲ, ನಾಳೆ ಮೆಕ್ಸಿಕೊ ಗಡಿ ಗೋಡೆ ಕಟ್ಟುವುದು ನಿಶ್ಚಿತ: ಟ್ರಂಪ್
ವಾಶಿಂಗ್ಟನ್, ಡಿ. 20: ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುವ ವಿಷಯದಲ್ಲಿ ಅಮೆರಿಕ ಸರಕಾರ ಇನ್ನೊಮ್ಮೆ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಸೆನೆಟ್ನಲ್ಲಿ ಪ್ರಯತ್ನಗಳು ನಡೆಯುತ್ತಿರುವಂತೆಯೇ, ಮುಂದಿನ ದಿನಗಳಲ್ಲಿ ನನ್ನ ಗಡಿ ಗೋಡೆಯನ್ನು ಕಟ್ಟುವುದು ನಿಶ್ಚಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
‘‘ಒಂದಲ್ಲ ಒಂದು ವಿಧದಲ್ಲಿ ನಾವು ಗಡಿ ಗೋಡೆಯನ್ನು ಕಟ್ಟುತ್ತೇವೆ’’ ಎಂದು ಬುಧವಾರ ಬೆಳಗ್ಗೆ ಮಾಡಿದ ಟ್ವೀಟ್ನಲ್ಲಿ ಟ್ರಂಪ್ ಹೇಳಿದ್ದಾರೆ.
‘‘ಗಡಿ ರಕ್ಷಣೆ ಮತ್ತು ಸೇನೆಗೆ ಖರ್ಚು ಮಾಡುವ ವಿಷಯ ಬಂದಾಗ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಆಡಳಿತಾರೂಢ ರಿಪಬ್ಲಿಕನ್ ಸಂಸದರ ಜೊತೆ ಬೆಕ್ಕು ಮತ್ತು ನಾಯಿಗಳಂತೆ ಜಗಳ ಮಾಡುತ್ತಾರೆ’’ ಎಂಬುದಾಗಿಯೂ ಟ್ರಂಪ್ ಆರೋಪಿಸಿದ್ದಾರೆ.
ಅಂತಿಮವಾಗಿ ಜಯ ನನ್ನದೇ ಎಂಬ ವಿಶ್ವಾಸವನ್ನು ಟ್ರಂಪ್ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಗಡಿ ಗೋಡೆಗೆ 5 ಬಿಲಿಯ ಡಾಲರ್ (ಸುಮಾರು 34,900 ಕೋಟಿ ರೂಪಾಯಿ) ಹಣಕ್ಕಾಗಿ ಬೇಡಿಕೆ ಇಡುವುದರಿಂದ ಹಿಂದೆ ಸರಿಯುವ ಸೂಚನೆಯನ್ನು ಅವರು ನೀಡಿದ್ದಾರೆ ಎಂದು ಹೇಳಲಾಗಿದೆ.
ಸೆನೆಟ್ನಲ್ಲಿ ಚರ್ಚೆಯಾಗುತ್ತಿರುವ ತಾತ್ಕಾಲಿಕ ವೆಚ್ಚ ಮಸೂದೆಯ ಬಗ್ಗೆ ಟ್ರಂಪ್ ಮುಕ್ತ ಮನೋಭಾವ ಹೊಂದಿದ್ದಾರೆ ಎಂಬುದಾಗಿ ಶ್ವೇತಭವನದ ಹಿರಿಯ ಸಹಾಯಕ ಕೆಲ್ಯಾನ್ ಕಾನ್ವೆ ಬುಧವಾರ ಸುದ್ದಿಗಾರರಿಗೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ತಾತ್ಕಾಲಿಕ ವೆಚ್ಚ ಮಸೂದೆಯು ಫೆಬ್ರವರಿ 8ರವರೆಗೆ ಸರಕಾರ ನಡೆಯಲು ಅನುದಾನ ಒದಗಿಸುತ್ತದೆ.