ವಾರಣಾಸಿಯಲ್ಲಿ ಶತಾಬ್ದಿ ರೈಲಿಗೆ ವಿದಾಯ, ಟ್ರೈನ್ 18ಕ್ಕೆ ಸ್ವಾಗತ
ಹೊಸದಿಲ್ಲಿ, ಡಿ. 20: ದೇಶದ ಅತಿ ವೇಗದ ರೈಲು ಶತಾಬ್ದಿ ಇನ್ನು ಮಂದೆ ಸಂಚಾರ ನಿಲ್ಲಿಸಲಿದೆ. ಅದರ ಬದಲಿಗೆ ಅತಿ ವೇಗದ ರೈಲು ಟ್ರೈನ್ 18 ಸಂಚಾರ ದಿಲ್ಲಿ ಮತ್ತು ವಾರಣಾಸಿ ನಡುವೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ತನ್ನ ಕ್ಷೇತ್ರವಾದ ವಾರಣಾಸಿಯಿಂದ ಟ್ರೈನ್ 18ಕ್ಕೆ ಡಿಸೆಂಬರ್ 29ರಂದು ಹಸಿರು ನಿಶಾನೆ ತೋರಿಸಲಿದ್ದಾರೆ.
ದೇಶದ ಮೊದಲ ಎಂಜಿನ್ ರಹಿತ ಟ್ರೈನ್ 18 ದಿಲ್ಲಿ ಹಾಗೂ ವಾರಣಾಸಿ ನಡುವೆ ಸಂಚರಿಸಲಿದೆ ಎಂದು ಮೂಲಗಳು ತಿಳಿಸಿವೆ. ಶತಾಬ್ದಿ ರೈಲನ್ನು 1988ರಲ್ಲಿ ಆರಂಭಿಸಲಾಗಿತ್ತು. ಪ್ರಸ್ತುತ ಈ ರೈಲು 20 ಮಾರ್ಗಗಳಲ್ಲಿ ಸಂಚರಿಸುತ್ತಾ ಮೆಟ್ರೊ ಹಾಗೂ ಇತರ ಪ್ರಮುಖ ನಗರಗಳ ನಡುವೆ ಸಂಪರ್ಕದ ಕೊಂಡಿಯಾಗಿದೆ. ಟ್ರೈನ್ 18 ಐಎಫ್‌ಸಿ ಚೆನ್ನೈಯಲ್ಲಿ 100 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗಂಟೆಗೆ 180 ಕಿ.ಮೀ. ಸಂಚರಿಸುವ ಈ ರೈಲು ಇತ್ತೀಚೆಗೆ ದಿಲ್ಲಿ-ರಾಜಧಾನಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಿತು. ತಾತ್ಕಾಲಿಕ ಯೋಜನೆ ಪ್ರಕಾರ ಈ ರೈಲು ಹೊಸದಿಲ್ಲಿಯಿಂದ ಬೆಳಗ್ಗೆ 6 ಗಂಟೆಗೆ ಸಂಚಾರ ಆರಂಭಿಸಲಿದೆ. ಅಪರಾಹ್ನ 2 ಗಂಟೆಗೆ ವಾರಣಾಸಿ ತಲುಪಲಿದೆ. ವಾರಣಾಸಿಯಿಂದ ಅಪರಾಹ್ನ 2.30ಕ್ಕೆ ಸಂಚಾರ ಆರಂಭಿಸಲಿದೆ. ಅದೇ ದಿನ ರಾತ್ರಿ 10.30ಕ್ಕೆ ಹೊಸದಿಲ್ಲಿ ತಲುಪಲಿದೆ.
ಹೊಳೆಯುವ ನೀಲಿ ಮೂತಿಯ ಈ ರೈಲಿನಲ್ಲಿ ಪ್ರಪಂಚದ ಅತ್ಯುತ್ತಮ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇದು ವೈಫೈ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಸ್ಪರ್ಶ-ಮುಕ್ತ ಬಯೋ ವ್ಯಾಕ್ಯೂಮ್ ಶೌಚಾಲಯ, ಲೆಡ್ ಲೈಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಹಾಗೂ ಉಷ್ಣಾಂಶ ನಿಯಂತ್ರಿಸುವ ಹವಾಮಾನ ನಿಯಂತ್ರಣ ವ್ಯವಸ್ಥೆ ಒಳಗೊಂಡಿದೆ.