ಅಕ್ರಮ ಪಿಸ್ತೂಲ್ ಹೊಂದಿದ ಆರೋಪ: ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿಯ ಸಹಚರ ಸೆರೆ
ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು, ಡಿ.20: ನಗರದ ಹೊಯಿಗೆ ಬಜಾರ್ ಪರಿಸರದಲ್ಲಿ ಕೊಲೆ ಪ್ರಕರಣದ ಆರೋಪಿ ಹೊಯಿಗೆ ಬಜಾರ್ ನಿವಾಸಿ ಹೇಮಂತ್ ಕುಮಾರ್ ಯಾನೆ ಹೇಮು (47) ಎಂಬಾತನನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿಯ ಸಹಚರನಾಗಿರುವ ಈತ ಅಕ್ರಮವಾಗಿ ಪಿಸ್ತೂಲು ಹಾಗೂ ಇತರ ಮಾರಕಾಯುಧಗಳನ್ನು ಹೊಂದಿದ್ದಾನೆಂಬ ಮಾಹಿತಿಯ ಆಧಾರದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ಆರೋಪಿಯಿಂದ ಪಿಸ್ತೂಲ್, 4 ಸಜೀವ ಮದ್ದುಗುಂಡುಗಳು, 2 ತಲವಾರುಗಳು, ಚೂರಿ, ಬೇಸ್ ಬಾಲ್ ಸ್ಟಿಕ್, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,12,750 ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ದುಷ್ಕೃತ್ಯ ನಡೆಸುವ ಉದ್ದೇಶದಿಂದ ತನ್ನ ವಶದಲ್ಲಿ ಅಕ್ರಮ ಪಿಸ್ತೂಲ್ ಹಾಗೂ ಸಜೀವ ಮದ್ದುಗುಂಡುಗಳು, ತಲವಾರುಗಳನ್ನು ಇಟ್ಟುಕೊಂಡಿದ್ದಾನೆ ಎಂಬ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಂಡರಲ್ಲದೆ, ಆರೋಪಿ ಯನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಪಾಂಡೇಶ್ವರ ಠಾಣೆಗೆ ಹಸ್ತಾಂತರಿಸಿದ್ದಾರೆ.
ಈತನ ವಿರುದ್ಧ 2014ರಲ್ಲಿ ಕದ್ರಿ ಪಾರ್ಕ್ ಬಳಿ ನಡೆದ ಅನೀಶ್ ಶೆಟ್ಟಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈ ಹಿಂದೆ ಪಾಂಡೇಶ್ವರ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣ ದಾಖಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.