ಮೂಡುಪೆರಾರದಲ್ಲಿ ಸರಗಳ್ಳತನ: ಆರೋಪಿ ಸೆರೆ

ಮಂಗಳೂರು, ಡಿ.20: ಮೂಡುಪೆರಾರ ಗ್ರಾಮದ ಎರಮೆ ಮತ್ತು ಕೊಳಂಬೆ ಗ್ರಾಮದ ಹೊಯಿಗೆ ಪದವು ಎಂಬಲ್ಲಿ ಈ ಹಿಂದೆ ನಡೆದ ಸರಗಳ್ಳತನ ಪ್ರಕರಣದ ಆರೋಪಿಯನ್ನು ಬಜ್ಪೆ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪಡುಪೆರಾರ ಗ್ರಾಮದ ಕತ್ತಲ್‌ಸಾರ್ ನಿವಾಸಿ ತಿಲಕ್ (27) ಬಂಧಿತ ಆರೋಪಿ. ಈತನಿಂದ 25 ಸಾವಿರ ರೂ. ಮೌಲ್ಯದ ಮತ್ತು 15 ಸಾವಿರ ರೂ. ಮೌಲ್ಯದ 2 ಚಿನ್ನದ ಸರ ಮತ್ತು 1 ಹೊಂಡಾ ಆಕ್ಟೀವಾ ಹಾಗೂ 3,700 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಡಿ.11ರಂದು ಮೂಡುಪೆರಾರ ಗ್ರಾಮದ ಎರಮೆ ಎಂಬಲ್ಲಿ ಪುಷ್ಪಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿಸರವನ್ನು ಎಳೆದುಕೊಂಡು ಪರಾರಿಯಾದ ಆರೋಪ ಈತನ ಮೇಲಿದೆ. ಅಲ್ಲದೆ ಡಿ.17ರಂದು ಕೊಳಂಬೆ ಗ್ರಾಮದ ಹೊಯಿಗೆಪದವು ನಿವಾಸಿ ಅಕ್ಷತಾ ಎಂಬವರು ತನ್ನ ಸಹೋದರಿಯೊಂದಿಗೆ ಹೊಯಿಗೆಪದವು ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾದ ಬಗ್ಗೆಯೂ ದೂರಲಾಗಿದೆ.
ಒಂದೇ ತಿಂಗಳಲ್ಲಿ ನಡೆದ ಈ ಸರ ಅಪಹರಣ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಅಪಹರಣ ಮಾಡಿದ ವ್ಯಕ್ತಿಯನ್ನೇ ಹೋಲುವ ವ್ಯಕ್ತಿಯೊಬ್ಬ ಮೂಡುಪೆರಾರ ಗ್ರಾಮದ, ಬಲವಂಡಿ ದೈವಸ್ಥಾನ ರಸ್ತೆ ಬಳಿ ಕಂಡು ಬಂದಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಎಸಿಪಿ ಮಂಜುನಾಥ ಶೆಟ್ಟಿ ನಿರ್ದೇಶನದಂತೆ ಬಜ್ಪೆ ಇನ್‌ಸ್ಪೆಕ್ಟರ್ ಎಸ್.ಪರಶಿವ ಮೂರ್ತಿ, ಎಸ್ಸೈ ಶಂಕರ ನಾಯರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







