ಸ್ವಚ್ಛತೆಗಾಗಿ ವಾರ್ಡ್‌ಮಟ್ಟದಲ್ಲಿ ಸಮಿತಿ ರಚನೆ: ಮುಹಮ್ಮದ್ ನಝೀರ್

ಮಂಗಳೂರು, ಡಿ.20: ನಗರವನ್ನು ಸ್ವಚ್ಛವಾಗಿಡುವ ಸಲುವಾಗಿ ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಹೇಳಿದರು.
ಸ್ವಚ್ಛ ಸರ್ವೇಕ್ಷಣೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ಹೊಸ ಯೋಜನೆಗಳ ಕುರಿತು ಪಾಲಿಕೆಯ ಸಭಾಂಗಣದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರಮುಖರು, ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮೊದಲ ಹಂತದಲ್ಲಿ ಕೆಲವು ವಾರ್ಡ್‌ಗಳನ್ನು ಆಯ್ಕೆ ಮಾಡಿ ಸಮಿತಿ ರಚಿಸಲಾಗುವುದು. ಬಳಿಕ ಎಲ್ಲ ವಾರ್ಡ್‌ಗಳಿಗೆ ಇದನ್ನು ವಿಸ್ತರಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಮನೆ-ಮನೆಯಲ್ಲಿ ಕಸ ವಿಂಗಡನೆ, ಘನತಾಜ್ಯ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಘನತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲೀಕರಣ ಕುರಿತ ಕರಡು ಬೈಲಾ ತಯಾರಿಸಲಾಗಿದೆ. ಪಾಲಿಕೆಯ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ. ನಾಗರಿಕರು ಬೈಲಾ ಕುರಿತಂತೆ ತಮ್ಮ ಅಭಿಪ್ರಾಯ, ಸಲಹೆ ನೀಡಬಹುದು ಎಂದು ಮುಹಮ್ಮದ್ ನಝೀರ್ ನುಡಿದರು.
ಸಭೆಯಲ್ಲಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸ್ಥಾಯಿ ಸಮಿತಿಯ ಅಧ್ಯಕ್ಷ ನವೀನ್ ಡಿಸೋಜ, ಲತಾ ಸಾಲ್ಯಾನ್, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ, ಜನಶಿಕ್ಷಣ ಟಸ್ಟ್‌ನ ಮುಖ್ಯಸ್ಥರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಯತೀಶ್ ಬೈಕಂಪಾಡಿ, ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಅಪ್ಪಿ, ದಯಾನಂದ ಶೆಟ್ಟಿ, ರೂಪಾ ಡಿ ಬಂಗೇರ, ಆಶಾ ಡಿಸಿಲ್ವ, ಪೂರ್ಣಿಮಾ, ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.
10 ಸಾವಿರ ಮನೆಗಳಲ್ಲಿ ಪಾಟ್ ಕಂಪೋಸ್ಟ್: ರಾಮಕೃಷ್ಣ ಮಠ ಆರಂಭಿಸಿರುವ ಪಾಟ್ ಕಾಂಪೋಸ್ಟಿಂಗ್ ವ್ಯವಸ್ಥೆಯನ್ನು ನಗರದ 450 ಮನೆಗಳಲ್ಲಿ ಅಳವಡಿಸಲಾಗಿದೆ. ಪ್ರಸಕ್ತ ಸಾಲಿನ ಯೋಜನೆಯನ್ನು 5 ಸಾವಿರ ಮನೆಗಳಿಗೆ ವಿಸ್ತರಿಸಲು ಮಠದ ವತಿಯಿಂದ ನಿರ್ಧರಿಸಲಾಗಿದೆ. ಇದಕ್ಕೆ ಪಾಲಿಕೆಯೂ ಕೈಜೋಡಿಸಲಿದ್ದು, ಒಟ್ಟು 10 ಸಾವಿರ ಮನೆಗಳಿಗೆ ವಿಸ್ತರಿಸಲು ಗುರಿ ಹೊಂದಲಾಗಿದೆ. ಮನೆಯ ಹಂತದಲ್ಲೇ ಹಸಿ ತ್ಯಾಜ್ಯ ಸಂಸ್ಕರಿಸಲು ಇದು ಸಹಕಾರಿಯಾಗಿದ್ದು, ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಮನೆಯಲ್ಲಿಯೂ ಇದನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ನಝೀರ್ ತಿಳಿಸಿದರು.
ಶೂನ್ಯ ಕಸ ನಿರ್ವಹಣಾ ಪದ್ಧತಿ: ಶೂನ್ಯ ಕಸ ನಿರ್ವಹಣಾ ಪದ್ಧತಿ ಅಳವಡಿಸಿಕೊಂಡು ರಾಮಕೃಷ್ಣ ಮಠದ ವತಿಯಿಂದ ಜಾರಿಗೆ ತರುವ ಕುರಿತು ಕೂಡ ಚಿಂತನೆ ಮಾಡಲಾಗಿದೆ. ಪೈಲೆಟ್ ಪ್ರಾಜೆಕ್ಟ್ ಆಗಿ ಪಾಲಿಕೆಯಿಂದ ನೀಡಲಾಗುವ ಜಾಗದಲ್ಲಿ 10 ಸಾವಿರ ಮನೆಗಳಿಂದ ಒಣಕಸವನ್ನು ಸಂಗ್ರಹಿಸಿ ಈ ಪದ್ಧತಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. 30 ಟನ್‌ನಷ್ಟು ಒಣಕಸ ಸಂಗ್ರಹವಾದರೆ ಈ ಯೋಜನೆ ಯಶಸ್ವಿಯಾಗಲಿದೆ. ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಣೆ ಮಾಡಲು ಯಾವುದಾದರೂ ಸ್ಥಳೀಯ ಸಂಸ್ಥೆಗಳಿಗೆ ನೀಡಿದರೆ ಹೆಚ್ಚು ಸ್ವಚ್ಛತೆ ಕಾಣಲು ಸಾಧ್ಯ ಎಂದು ರಾಮಕೃಷ್ಣ ಮಠದ ಏಕಗಂಮ್ಯಾನಂದ ಸ್ವಾಮೀಜಿ ಹೇಳಿದರು.
ಸ್ವಚ್ಛ ಸರ್ವೇಕ್ಷಣೆ -2019: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ್‌ಮಿಷನ್‌ನಡಿಯಲ್ಲಿ ನಡೆಯಲಿರುವ ಸ್ವಚ್ಛ ಸರ್ವೇಕ್ಷಣೆ -2019ರಲ್ಲಿ ಪಾಲಿಕೆ ಭಾಗವಹಿಸುತ್ತಿದೆ. ಜ.4ರಿಂದ ಫೆ.4ರವರೆಗೆ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷಾ ತಂಡ ನಗರಕ್ಕೆ ಭೇಟಿ ನೀಡಲಿದೆ. ಸಾರ್ವಜನಿಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿಬೇಕು. ನಗರದ ಸ್ವಚ್ಛತೆಯ ಪರೀಕ್ಷೆಯಲ್ಲಿ 5000 ಅಂಕಗಳಿದ್ದು, ಈ ಪೈಕಿ 1250 ಅಂಕ ಸಾರ್ವಜನಿಕರ ಅಭಿಪ್ರಾಯಕ್ಕೆ ನೀಡಲಾಗುವುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳಬೇಕಿದೆ. ಲಿಂಕ್‌ಗೆ https://www.swachhsurvekshan2019.org/CitizenFeedback ಲಾಗಿನ್ ಆಗಿ ದ.ಕ. ಜಿಲ್ಲೆ, ಮಂಗಳೂರು ಸಿಟಿ ಕಾರ್ಪೋರೇಶನ್ ಆಯ್ಕೆ ಮಾಡಿ ಅಲ್ಲಿ ಕೇಳುವ 7 ಸರಳ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರ ನೀಡಿ ನಗರಕ್ಕೆ ಹೆಚ್ಚಿನ ಅಂಕಗಳಿಸಲು ಸಹರಿಸಬೇಕು. ‘ಸ್ವಚ್ಛತಾ ಆ್ಯಪ್’ ಡೌನ್‌ಲೋಡ್ ಮಾಡಿಯೂ ಸಿಟಿಜನ್ ಫೀಡ್‌ಬ್ಯಾಕ್ ನೀಡಬಹುದು. 1969 ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ಉತ್ತರಿಸಬಹುದು ಎಂದು ಮುಹಮ್ಮದ್ ನಝೀರ್ ತಿಳಿಸಿದರು.