ಬಿಬಿಎಂಪಿ ವತಿಯಿಂದ ಸೈಕಲ್ ಪಥ ನಿರ್ಮಾಣ
ಬೆಂಗಳೂರು, ಡಿ.20: ಸೈಕಲ್ ಸವಾರರ ಅನುಕೂಲಕ್ಕಾಗಿ ಬಿಬಿಎಂಪಿ ವತಿಯಿಂದ ಪಾದಚಾರಿ ಮಾರ್ಗಗಳಿಗೆ ಅಂಟಿಕೊಂಡಂತೆ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲು ಮುಂದಾಗಿದ್ದಾರೆ.
ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸೈಕಲ್ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಪಾಲಿಕೆ ಈ ತೀರ್ಮಾನ ಕೈಗೊಂಡಿದೆ. ಈಗಾಗಲೇ ಬಾಡಿಗೆ ಸೈಕಲ್ ಸೇವೆ ಆರಂಭ ಮಾಡಲು ಯೋಜನೆ ರೂಪಿಸಿದ್ದು, ಅದಕ್ಕೆ ಪೂರಕವಾಗಿ ಸೈಕಲ್ ಪಥ ನಿರ್ಮಿಸಲು ಟೆಂಡರ್ ಕರೆಯಲಾಗಿದೆ.
ಪರಿಸರ ಸ್ನೇಹಿ ವಾಹನ ಬಳಕೆಗೆ ಪ್ರೋತ್ಸಾಹಿಸಲು ಹಾಗೂ ವಾಹನ ದಟ್ಟಣೆ ನಿಯಂತ್ರಣ್ಕಕಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯ ಬೆಂಗಳೂರಿನಲ್ಲಿ ಟ್ರಿಣ್ ಟ್ರಿಣ್ ಯೋಜನೆ ಜಾರಿ ಮಾಡಿದೆ. ಸೈಕಲ್ ಸವಾರರಿಗೆ ಕಡಿಮೆ ದರದಲ್ಲಿ ಸೈಕಲ್ ಬಾಡಿಗೆ ನೀಡುವುದು ಈ ಯೋಜನೆಯ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ 125 ಕಿ.ಮೀ.ಉದ್ದದ ಸೈಕಲ್ ಪಥ ನಿರ್ಮಾಣ ಮಾಡಲಾಗುತ್ತಿದೆ.
ಬಿಬಿಎಂಪಿ 75 ಕಿ.ಮೀ.ಉದ್ದದ ಸೈಕಲ್ ಪಥ ನಿರ್ಮಿಸಿಕೊಡಲಿದ್ದು, ಪ್ರಮುಖವಾಗಿ ಮೆಟ್ರೋ ಮಾರ್ಗಗಳಿಗೆ ಸಂಪರ್ಕಿಸುವ ಪಾದಚಾರಿ ಮಾರ್ಗಗಳಲ್ಲಿ ಆದ್ಯತೆ ಮೇರೆಗೆ ಪಥ ನಿರ್ಮಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಇದರಿಂದಾಗಿ ಮೆಟ್ರೋ ಬಳಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪಾಲಿಕೆ ಹೇಳಿದೆ.
55.50 ಕೋಟಿ ರೂ.ವೆಚ್ಚ: ಪಾದಚಾರಿ ಮೇಲ್ದರ್ಜೆಯೊಂದಿಗೆ ಸೈಕಲ್ ಪಥ ನಿರ್ಮಿಸಿಕೊಡುವ ಯೋಜನೆಯ ಮೊದಲ ಹಂತಕ್ಕೆ 55.50 ಕೋಟಿ ರೂ. ವೆಚ್ಚವಾಗಲಿದೆ. ನಗರದ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ಹೊರವರ್ತುಲ ರಸ್ತೆ ಮೂಲಕ ಸುರಂಜನ್ ದಾಸ್ ರಸ್ತೆಗೆ ಸಂಪರ್ಕಿಸುವಂತೆ ಸೈಕಲ್ ಪಥ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸೈಕಲ್ ಪಥ ನಿರ್ಮಾಣ ಹಾಗೂ ಪಾದಚಾರಿ ಅಭಿವೃದ್ಧಿಗೆ ಟೆಂಡರ್ ಆಹ್ವಾನಿಸಿದ್ದು, ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಲಿದೆ.
ಆರು ಸಾವಿರ ಸೈಕಲ್ ಖರೀದಿ: ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬಾಡಿಗೆ ಸೈಕಲ್ ಯೋಜನೆ ಜಾರಿಗೊಳಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ ಮುಂದಾಗಿದೆ. ಅದರಂತೆ ಪ್ರತಿ 250 ರಿಂದ 350 ಮೀಟರ್ ದೂರದಲ್ಲಿ ಒಂದು ಸೈಕಲ್ ನಿಲುಗಡೆ ತಾಣವನ್ನು ನಿರ್ಮಿಸುವ ಮೂಲಕ ಒಟ್ಟು 25 ಕಿ.ಮೀ. ವ್ಯಾಪ್ತಿಯಲ್ಲಿ ಯೋಜನೆ ಜಾರಿಯಾಗಲಿದ್ದು, 345 ನಿಲುಗಡೆ ತಾಣಗಳು ಸ್ಥಾಪನೆಯಾಗಲಿವೆ. ಅಲ್ಲದೆ, ಆರು ಸಾವಿರ ಸೈಕಲ್‌ಗಳನ್ನೂ ಖರೀದಿ ಮಾಡಲಿದ್ದು, ಸ್ಮಾರ್ಟ್‌ಕಾರ್ಡ್ ಅಥವಾ ಆ್ಯಪ್ ಆಧಾರಿತ ಸೈಕಲ್ ಬಾಡಿಗೆಗೆ ಪಡೆಯಬಹುದು.







