ಡಿ.23, 24ರಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ
ಮೈಸೂರು,ಡಿ.20: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.23,24ರಂದು ಪಿರಿಯಾಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್, ಗೊರಳ್ಳಿ ಜಗದೀಶ್ ಇರಲಿದ್ದು, ನಂತರ ಸಮ್ಮೇಳನಾಧ್ಯಕ್ಷ ಇಂದೂಧರ ಹೊನ್ನಾಪುರ ಅವರ ಮೆರವಣಿಗೆಗೆ ಜಿ.ಪಂ. ಅಧ್ಯಕ್ಷ ನಯಿಮಾ ಸುಲ್ತಾನ್ ಚಾಲನೆ ನೀಡುವರು. ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ವೇದಿಕೆ ತಲುಪಲಿದೆ ಎಂದು ತಿಳಿಸಿದರು. ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮ್ಮೇಳನಕ್ಕೆ ಚಾಲನೆ ನೀಡುವರು. ಸಂಸದ ಪ್ರತಾಪ್ ಸಿಂಹ, ಸಚಿವೆ ಜಯಮಾಲ, ಶಾಸಕ ಅಡಗೂರು ವಿಶ್ವನಾಥ್, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ ಇನ್ನಿತರ ಗಣ್ಯರು ಹಾಜರಿರಲಿದ್ದಾರೆ.
ಮಧ್ಯಾಹ್ನ 2.30ಕ್ಕೆ “ಮೈಸೂರು ಜಿಲ್ಲಾ ದರ್ಶನ” ವಿಷಯವಾಗಿ ಮೊದಲ ಗೋಷ್ಠಿ, ಹಂಪಿ ಕನ್ನಡ ವಿವಿಯ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಪ್ರೊ.ಎಸ್.ಜಿ.ಚೈತ್ರ ಇವರಿಂದ ವಿಷಯ ಮಂಡನೆ, ಸಂಜೆ 4 ಗಂಟೆಗೆ “ಪಿರಿಯಾಪಟ್ಟಣ ತಾಲೂಕು-ಕನ್ನಡಿ, ಕೈದಿವಿಗೆ” ವಿಷಯವಾಗಿ ಎರಡನೇ ಗೋಷ್ಠಿ ಸಹಾಯಕ ಪ್ರಾಧ್ಯಾಪಕಿ ಡಾ.ಮನಾಪುರ ವಿಜಯಲಕ್ಷ್ಮಿ, ಡಾ.ಎನ್.ಆರ್.ಚಂದ್ರೇಗೌಡ ಅವರಿಂದ ನಡೆಯಲಿದ್ದು, ನಂತರ 5.15 ರಿಂದ ಹಿರಿಯ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಎರಡನೇ ದಿನ: ಡಿ.24ರಂದು ಬೆಳಗ್ಗೆ 10 ಗಂಟೆಯಿಂದ “ಜನಪರ ಚಳುವಳಿಗಳು ಮತ್ತು ವರ್ತಮಾನದ ಸವಾಲುಗಳು” ವಿಚಾರಗೋಷ್ಠಿ ನಡೆಯಲಿದೆ. ರೈತ ಮುಖಂಡ ಪ್ರೊ.ಕೆ.ಸಿ.ಬಸವರಾಜು, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಕುಪ್ಪೆ ನಾಗರಾಜು, ಮೈವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅವರು ವಿಷಯ ಮಂಡಿಸಲಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ “ಗ್ರಾಮೀಣ ಭಾರತದ ಪ್ರಚಲಿತ ಸಮಸ್ಯೆಗಳು”, ಪ್ರಗತಿಪರ ಚಿಂತಕರಾದ ಡಾ.ವಸಂತಕುಮಾರ ತಿಮಕಾಪುರ, ಡಾ.ಮುಜಾಫರ್ ಅಸ್ಸಾದಿ, ಎನ್.ಕೇಶವಮೂರ್ತಿ ಮೊದಲಾದವರಿಂದ “ನೀರಾವರಿ ಯೋಜನೆಗಳು” ವಿಷಯವಾಗಿ ಡಾ.ಗುಬ್ಬಿಗೂಡು ರಮೇಶ್, ಅರ್ಜುನಹಳ್ಳಿ ಪ್ರಸನ್ನಕುಮಾರ್ , “ಸಂಸ್ಕೃತಿ ಮತ್ತು ರಾಜಕಾರಣ” ದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್, “ಮಹಿಳೆ-ಸಮಕಾಲೀನ ಸವಾಲುಗಳು” ವಿಷಯವಾಗಿ ಮಹಿಳಾ ಚಿಂತಕಿ ಅಖಿಲಾ ವಿದ್ಯಾಸಂದ್ರ ಅವರುಗಳು ಮಾತನಾಡುವರು.
ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, "ಕನ್ನಡ ಮತ್ತು ಹೊಸ ತಲೆಮಾರು” ವಿಷಯವಾಗಿ ಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತ ಮಂಜುನಾಥ ಆದ್ದೆ, ಲೇಖಕ ಶ್ರೀಪಾದ ಭಟ್, ಮುತ್ತುರಾಜು, ಬಿ.ಎಂ. ಚೈತ್ರ ಉಪನ್ಯಾಸ ನೀಡುವರು.
ಸಂಜೆ 6 ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಟ್ಟದಪುರದ ಸಲಿಲಾಖ್ಯ ಮಠದ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಅವರು ಸಮಾರೋಪ ಭಾಷಣ ಮಾಡಲಿದ್ದು, ಶಾಸಕ ಕೆ.ಮಹದೇವ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಸಾ.ರಾ.ಮಹೇಶ್ ಸೇರಿದಂತೆ ಹಲವಾರು ಗಣ್ಯರು ಹಾಜರಿರಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಜಯಪ್ಪ ಹೊನ್ನಾಳಿ, ಕೆ.ಎಸ್.ನಾಗರಾಜು, ರಾಜಶೇಖರ ಕದಂಬ, ಎಂ.ಚಂದ್ರಶೇಖರ್, ಕೆ.ಎಸ್.ಶಿವರಾಂ, ಮಹ್ಮದ್ ಶಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







