ದೇವಸ್ಥಾನದಲ್ಲಿ ವಿಷ ಪ್ರಸಾದ ಪ್ರಕರಣ: ಆಸ್ಪತ್ರೆಯಿಂದ 7 ಮಕ್ಕಳು ಬಿಡುಗಡೆ
ಮೈಸೂರು,ಡಿ.20: ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಸಾದ ತಿಂದು ಅಸ್ವಸ್ಥರಾಗಿದ್ದ 7 ಮಕ್ಕಳನ್ನು ಇಂದು ಮೈಸೂರು ಸುಯೋಗ್ ಆಸ್ಪತ್ರೆ ವೈದ್ಯರು ಬಿಡುಗಡೆ ಮಾಡಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವೈದ್ಯರು, ಒಂಭತ್ತರಲ್ಲಿ 7 ಮಕ್ಕಳು ಸಂಪೂರ್ಣ ಗುಣಮುಖರಾಗಿದ್ದು, ಇವರನ್ನೆಲ್ಲ ಬಿಡುಗಡೆ ಮಾಡಲಾಗಿದೆ. ಇನ್ನೂ ಇಬ್ಬರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಇವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ವಿಷ ಪ್ರಸಾದ ತಿಂದು ಸುಯೋಗ್ ಆಸ್ಪತ್ರೆ ಸೇರಿದ ಐವರು ರೋಗಿಗಳ ಪೈಕಿ ಒಬ್ಬರನ್ನು ಐಸಿಯುನಿಂದ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಉಳಿದ ನಾಲ್ವರಿಗೆ ವೆಂಟಿಲೇಟರ್ ಮೂಲಕವೇ ಚಿಕಿತ್ಸೆ ಮುಂದುವರೆಸಲಾಗಿದೆ. ಇದರಲ್ಲಿ ಮೂವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಇನ್ನೊಬ್ಬರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಲು ವಿವಿಧ ಚಿಕಿತ್ಸೆಗಳನ್ನು ಮುಂದುವರೆಸಲಾಗಿದೆ ಎಂದು ಸುಯೋಗ್ ಆಸ್ಪತ್ರೆ ಮುಖ್ಯಸ್ಥ ಯೋಗಣ್ಣ ವಿವರಣೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿಯಿಂದಲೂ ಮಾಹಿತಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, 'ಮೈಸೂರಿನ ವಿವಿಧ ಆಸ್ಪತ್ರೆಯಲ್ಲಿ 84 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 21 ಮಂದಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ವೇಳೆಗೆ 84 ಮಂದಿಯಲ್ಲಿ 7 ಮಕ್ಕಳು ಸೇರಿದಂತೆ 20 ಮಂದಿಯನ್ನು ವಿವಿಧ ಆಸ್ಪತ್ರೆಯಿಂದ ಡಿಸ್ವಾರ್ಜ್ ಮಾಡಲಾಗುವುದು ಎಂದು ಚಾಮರಾಜನಗರ ಆಸ್ಪತ್ರೆಯ ಆರೋಗ್ಯಾಧಿಕಾರಿ ಪ್ರಸಾದ್ ತಿಳಿಸಿದರು.
ಇದಲ್ಲದೇ, 21 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಪೈಕಿ 3 ಜನರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಇದೇ ವೇಳೆ ಮೈಸೂರು ಜಿಲ್ಲೆಯ ಆರೋಗ್ಯಾಧಿಕಾರಿ ಬಸವರಾಜ್ ಮಾಹಿತಿ ನೀಡಿದರು.







