ಚಲಿಸುತ್ತಿದ್ದ ಸಾರಿಗೆ ಬಸ್‍ನಲ್ಲಿ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು

ಮಂಡ್ಯ, ಡಿ.20: ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಖಾಸಗಿ ಬಸ್ ವಿ.ಸಿ ನಾಲೆಯ ಸಂಪರ್ಕ ನಾಲೆಗೆ ಬಿದ್ದು 30 ಜನ ಜಲಸಮಾಧಿಯಾದ ದುರಂತ ಮಾಸುವೇ ಮೊದಲೇ ಪಾಂಡವಪುರ ಪಟ್ಟಣದ ಹಾರೋಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡು ನಡೆಯಬೇಕಾಗಿದ್ದ ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಮೈಸೂರಿನಿಂದ ಪಾಂಡವಪುರ ಮಾರ್ಗವಾಗಿ ಅರಸೀಕೆರೆಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ (ಕೆ.ಎ 11,ಎಫ್-0274) ಹಿಂಭಾಗ ಸೀಟಿನಲ್ಲಿ ಬ್ರೇಕ್ ಸಿಗ್ನಲ್ ಲೈಟ್‍ನಲ್ಲಿ ಜೋಡಿಸಿದ್ದ ವಿದ್ಯುತ್ ವೈರ್ ಗಳು ಒಂದಕ್ಕೊಂದು ಸ್ಪರ್ಶವಾಗಿ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ತಕ್ಷಣವೇ ಬಸ್‍ನ ಕಿಟಕಿ ಗಾಜು ಒಡೆದು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಹಿಂಬದಿ ಬಾಗಿಲಿನಿಂದ ಹೊರಬಂದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.
ಬ್ರೇಕ್ ಸಿಗ್ನಲ್ ಲೈಟ್‍ನ ವಿದ್ಯುತ್ ವೈರ್ ಗಳು ಒಂದಕ್ಕೊಂದು ಸ್ಪರ್ಶವಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೆ.ಆರ್.ಪೇಟೆ ಡಿಪೋಗೆ ಸೇರಿದ ಈ ಬಸ್‍ನಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 65ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಈ ವೇಳೆ ಕೆಲ ಪ್ರಯಾಣಿಕರು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಬೇರೆ ಬಸ್‍ಗಳನ್ನು ಏರಿ ತಮ್ಮೂರಿಗೆ ಹೊರಟರೆ, ಮತ್ತೆ ಕೆಲವರು ಅದೇ ಬಸ್‍ನಲ್ಲಿ ಪ್ರಯಾಣ ಬೆಳೆಸಿದರು. ಇನ್ನೂ ಕೆಲವರು ನಮಗೆ ಬೇರೆ ಬಸ್ ವ್ಯವಸ್ಥೆ ಮಾಡಿ ಊರಿಗೆ ಕಳುಹಿಸಿಕೊಡಿ, ಇಲ್ಲವೇ ನಮ್ಮ ಹಣ ವಾಪಸ್ ಮಾಡಿ’ ಎಂದು ಬಸ್ ಚಾಲಕ ಹಾಗೂ ಕಂಡಕ್ಟರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಹಾರೋಹಳ್ಳಿ ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ನೆರವಾದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.







