ಬಾಲಕ ತೃತೀಯ ಲಿಂಗಿಯಾಗಿ ಪರಿವರ್ತನೆ ಪ್ರಕರಣ: 3 ಮಂಗಳಮುಖಿಯರು ಸೇರಿ ಐವರ ಬಂಧನ

ಮಂಡ್ಯ, ಡಿ.20: ಅಪ್ರಾಪ್ತ ಬಾಲಕನ್ನು ತೃತೀಯ ಲಿಂಗಿಯಾಗಿ ಮಾಡಿ ಭಿಕ್ಷಾಟನೆಗೆ ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪೇಟೆಯಲ್ಲಿ ಈ ಪ್ರಕರಣ ನಡೆದಿದ್ದು, ಮೂವರು ಮಂಗಳಮುಖಿಯರು ಸೇರಿದಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ಮಂಗಳಮುಖಿಯರಾದ ಜಯಶ್ರೀ, ಮಂದಾರ ಹಾಗೂ ಮಹೇಶ್ವರಿ ಎಂಬುವವರ ಜೊತೆಗೆ ಅರವಿಂದ್ ಹಾಗೂ ಅಜಯ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ವೈದ್ಯೆ ಹಾಗೂ ನೋಟರಿ ಕೊಟ್ಟಿದ್ದ ವಕೀಲನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
16 ವರ್ಷದ ಹುಡುಗನೊಬ್ಬ ಬೆಂಗಳೂರಿನ ತಮ್ಮ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ಓದುತ್ತಿದ್ದ. ರಜೆಗೆಂದು ಸ್ವಗ್ರಾಮಕ್ಕೆ ಬಂದಿದ್ದ. ವಾಪಸ್ ಬೆಂಗಳೂರಿಗೆ ಕಳುಹಿಸಲು ಪೋಷಕರು ಕೆ.ಆರ್.ಪೇಟೆ ಪಟ್ಟಣದ ಸರಕಾರಿ ಬಸ್ ಸ್ಟ್ಯಾಂಡ್‍ಗೆ ಬಂದು ಬೆಂಗಳೂರು ಬಸ್ ಹತ್ತಿಸಿದ್ದರು. ಆದರೆ, ಬೆಂಗಳೂರಿನ ಸಂಬಂಧಿಕರನ್ನು ವಿಚಾರಿಸಿದಾಗ ತಮ್ಮ ಮಗ ಬಂದಿಲ್ಲ ಎಂಬುದು ಗೊತ್ತಾಗಿದೆ. ತಮ್ಮ ಮಗ ನಾಪತ್ತೆಯಾಗಿರುವುದಾಗಿ ಎಂಟು ತಿಂಗಳ ಹಿಂದೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು.
ಕೆಲವು ದಿನಗಳಲ್ಲಿ ತೃತೀಯ ಲಿಂಗಿಯಾಗಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಬಾಲಕ ಕಾಣಿಸಿಕೊಂಡಿದ್ದ. ಆತನನ್ನು ಗಮನಿಸಿದ ಸಂಬಂಧಿಕರು, ಕೂಡಲೇ ಪೋಷಕರಿಗೆ ಕರೆಮಾಡಿ, ಆತನನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.







