ಎಂಟು ಆರೋಪಿಗಳ ದೋಷನಿರ್ಣಯ ಪ್ರಕಟಿಸಿದ ಜಾರ್ಖಂಡ್ ನ್ಯಾಯಾಲಯ
ಲಾತೇಹಾರ್:ಗುಂಪಿನಿಂದ ಥಳಿಸಿ ಹತ್ಯೆಗಳ ಪ್ರಕರಣ

ರಾಂಚಿ,ಡಿ.20: ರಾಜ್ಯ ಲಾತೇಹಾರ್ ಜಿಲ್ಲೆಯಲ್ಲಿ 2016,ಮಾರ್ಚ್‌ನಲ್ಲಿ ಜಾನುವಾರು ವ್ಯಾಪಾರಿ ಹಾಗೂ ಓರ್ವ ಅಪ್ರಾಪ್ತ ವಯಸ್ಕ ಬಾಲಕನನ್ನು ತಥಾಕಥಿತ ಗೋರಕ್ಷಕರ ಗುಂಪು ಥಳಿಸಿ ಹತ್ಯೆಗೈದಿದ್ದ ಪ್ರಕರಣದಲ್ಲಿ ಗುರುವಾರ ತೀರ್ಪನ್ನು ಪ್ರಕಟಿಸಿದ ಲಾತೇಹಾರದ ಜೆಎಂಎಫ್‌ಸಿ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿದೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಘೋಷಿಸುವ ನಿರೀಕ್ಷೆಯಿದೆ.
ಮನೋಜ ಸಾಹು,ಅವಧೇಶ ಸಾವೋ,ಪ್ರಮೋದ ಸಾವೋ,ಮಿಥಿಲೇಶ ಸಾವೋ ಅಲಿಯಾಸ್ ಬಂಟಿ,ವಿಶಾಲ ತಿವಾರಿ,ಮನೋಜಕುಮಾರ ಸಾವೋ,ಸಹದೇವ ಸಾವೋ ಮತ್ತು ಅರುಣ್ ಸಾವೋ ಅವರನ್ನು ಅಪರಾಧಿಗಳೆಂದು ನ್ಯಾ.ರಿಷಿಕೇಶ ಕುಮಾರ್ ಅವರು ಘೋಷಿಸಿದರು.
2016,ಮಾ.17ರಂದು ನೆರೆಯ ಜಿಲ್ಲೆಯಲ್ಲಿನ ಜಾನುವಾರು ಸಂತೆಗೆ ತೆರಳುತ್ತಿದ್ದ ಜಾನುವಾರು ವ್ಯಾಪಾರಿ ಮಜ್ಲೂಮ್ ಅನ್ಸಾರಿ ಮತ್ತು ಶಾಲಾಬಾಲಕ ಇಮ್ತಿಯಾಝ್ ಖಾನ್ ಅವರನ್ನು ಅಪಹರಿಸಿದ್ದ ತಥಾಕಥಿತ ಗೋರಕ್ಷಕರ ಗುಂಪು ಅವರನ್ನು ಥಳಿಸಿ ಹತೈಗೈದ ಬಳಿಕ ಶವಗಳನ್ನು ಮರವೊಂದಕ್ಕೆ ನೇತು ಹಾಕಿತ್ತು.
ಈ ಹತ್ಯೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜ್ಯ ಬಿಜೆಪಿ ನಾಯಕನೋರ್ವನ ಬಂಧನಕ್ಕೆ ಮಾನವ ಹಕ್ಕು ಗುಂಪುಗಳು ಈ ವರ್ಷದ ಪೂರ್ವಾರ್ಧದಲ್ಲಿ ಆಗ್ರಹಿಸಿದ್ದವು. ಸ್ವತಂತ್ರ ತನಿಖೆಯನ್ನು ನಡೆಸಿದ್ದ ಈ ಗುಂಪುಗಳು ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸುವಂತೆ ಮತ್ತು ಪ್ರಕರಣದಲ್ಲಿ ತನಿಖೆಯನ್ನು ಬುಡಮೇಲುಗೊಳಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಜಾರ್ಖಂಡ್ ಸರಕಾರವನ್ನು ಆಗ್ರಹಿಸಿದ್ದವು.
ಕಳೆದ ವರ್ಷ ಸರಣಿ ಗುಂಪು ಹತ್ಯೆ ಪ್ರಕರಣಗಳಿಗೆ ಜಾರ್ಖಂಡ್ ಸಾಕ್ಷಿಯಾಗಿತ್ತು. ಜೂನ್,2017ರಲ್ಲಿ ರಾಮಗಡ ಜಿಲ್ಲೆಯಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈಯಲಾಗಿದ್ದರೆ,ಗಿರಿಧಿ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಜನರ ಗುಂಪು ದನವನ್ನು ಕೊಂದ ಶಂಕೆಯಲ್ಲಿ ಮುಸ್ಲಿಂ ಡೇರಿ ಮಾಲಕನ ಮೇಲೆ ದಾಳಿ ನಡೆಸಿತ್ತು. ಈ ವರ್ಷದ ಜೂನ್‌ನಲ್ಲಿ ಗೊಡ್ಡಾ ಜಿಲ್ಲೆಯಲ್ಲಿ ದನವನ್ನು ಕದಿಯುತ್ತಿದ್ದರು ಎಂದು ಆರೋಪಿಸಿ ಗುಂಪೊಂದು ಇಬ್ಬರನ್ನು ಥಳಿಸಿ ಹತ್ಯೆಗೈದಿತ್ತು.







