ಜಾರ್ಖಂಡ್: ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದ ಸಾಧು ಬಂಧನ
ಜಮ್ಷೆಡ್‌ಪುರ,ಡಿ.20: ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಅತ್ಯಾಚಾರಕ್ಕೆ ಯತ್ನಿಸಿದ್ದ ಇಲ್ಲಿಯ ಭಾರತ ಸೇವಾಶ್ರಮ ಸಂಘ(ಬಿಎಸ್‌ಎಸ್)ದ ಸಾಧುವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಡಿ.18ರಂದು ಈ ಘಟನೆ ನಡೆದಿದ್ದು,ಸಾಧುವಿನ ಅಸಭ್ಯ ವರ್ತನೆಯ ವಿರುದ್ಧ 15ರ ಹರೆಯದ ಬಾಲಕಿ ದೂರು ದಾಖಲಿಸಿದ್ದಾಳೆ,ಆದರೆ ಹೆಚ್ಚಿನ ವಿವರಗಳನ್ನು ಆಕೆ ನೀಡಿಲ್ಲ ಎಂದು ಡಿವೈಎಸ್‌ಪಿ ಅರವಿಂದ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಮಧ್ಯಪ್ರದೇಶದ ಜಬಲ್ಪುರ ಮೂಲದ ಬಾಲಕಿ ಇತ್ತೀಚಿಗಷ್ಟೇ ತನ್ನ ಅಣ್ಣ-ಅತ್ತಿಗೆಯೊಂದಿಗೆ ಇಲ್ಲಿಗೆ ಬಂದಿದ್ದು, ಸಮೀಪದ ಕಲಾನಗರದಲ್ಲಿಯ ಬಾಡಿಗೆ ಮನೆಗೆ ತೆರಳುವ ಮುನ್ನ ಅವರಿಗೆ 10 ದಿನಗಳ ಕಾಲ ಆಶ್ರಮದಲ್ಲಿ ವಸತಿ ಸೌಲಭ್ಯ ಒದಗಿಸಲಾಗಿತ್ತು.
ಬುಧವಾರ ಸೋನಾರಿಯ ಬಿಎಸ್‌ಎಸ್ ಸಂಕೀರ್ಣದಲ್ಲಿಯ ದೇವಸ್ಥಾನಕ್ಕೆ ತೆರಳಿದ್ದ ಬಾಲಕಿ ಹಲವಾರು ಗಂಟೆಗಳಾದರೂ ವಾಪಸ್ ಬಂದಿರಲಿಲ್ಲ. ತೀವ್ರ ಹುಡುಕಾಟದ ಬಳಿಕ ಸಾಧುವಿನ ಬಾತ್‌ರೂಮಿನಿಂದ ಆಕೆಯನ್ನು ರಕ್ಷಿಸಲಾಗಿತ್ತು.
ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದ್ದು,ಪ್ರಕರಣದ ಹೆಚ್ಚಿನ ವಿವರಗಳಿಗಾಗಿ ಆಸ್ಪತ್ರೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಕುಮಾರ್ ತಿಳಿಸಿದರು.