ಫಿಫಾ ರ‍್ಯಾಂಕಿಂಗ್: ಬೆಲ್ಜಿಯಂ ನಂ.1; ವಿಶ್ವ ಚಾಂಪಿಯನ್ ಫ್ರಾನ್ಸ್ ಗೆ 2ನೇ ಸ್ಥಾನ

ಪ್ಯಾರಿಸ್, ಡಿ.20: ವಿಶ್ವ ಫುಟ್ಬಾಲ್ ರ್ಯಾಂಕಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡವನ್ನು ಹಿಂದಿಕ್ಕಿದ ಬೆಲ್ಜಿಯಂ ತಂಡ ವರ್ಷಾಂತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಫಿಫಾ ಗುರುವಾರ ರ್ಯಾಂಕಿಂಗ್‌ನ್ನು ಪ್ರಕಟಿಸಿದೆ. ಈ ವರ್ಷದ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ಗೆ ಶರಣಾಗಿದ್ದ ಬೆಲ್ಜಿಯಂ ಸದ್ಯ 1,727 ಅಂಕಗಳನ್ನು ಗಳಿಸಿ ಅಗ್ರ ಸ್ಥಾನದಲ್ಲಿದೆ. 1,726 ಅಂಕ ಗಳಿಸಿ ಕೇವಲ ಒಂದು ಅಂಕ ಹಿಂದಿರುವ ಫ್ರಾನ್ಸ್ 2ನೇ ಸ್ಥಾನದಲ್ಲಿದೆ. 1,676 ಅಂಕಗಳಿಂದ ಬ್ರೆಝಿಲ್ ಮೂರನೇ ಸ್ಥಾನದಲ್ಲಿದೆ.
2017ರ ಕ್ರಿಸ್‌ಮಸ್ ವೇಳೆ ರ್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿದ್ದ ಫ್ರಾನ್ಸ್ 2018ರ ‘ಬೆಸ್ಟ್ ಮೂವರ್’ ಆಗಿ ಹೊರಹೊಮ್ಮಿದೆ. ಡಿಸೆಂಬರ್ 2017ರಲ್ಲಿ ಇದ್ದ ಅಂಕಗಳಿಗಿಂತ 165 ಅಧಿಕ ಅಂಕಗಳನ್ನು ಗಳಿಸಿದೆ ಎಂದು ಫಿಫಾ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.
ರ್ಯಾಂಕಿಂಗ್‌ನ ಅಗ್ರ 50 ದೇಶಗಳಲ್ಲಿ ಯುರೋಪ್ ಹಾಗೂ ಏಶ್ಯಾದ ದೇಶಗಳು ಸಿಂಹಪಾಲು ಪಡೆದಿವೆ. ಸದ್ಯ 31 ತಂಡಗಳು ಯುರೋಪ್‌ನದ್ದಾದರೆ, ಏಶ್ಯಾದ 3 ತಂಡಗಳು ಪಟ್ಟಿಯಲ್ಲಿವೆ ಎಂದು ವಿಶ್ವ ಫುಟ್ಬಾಲ್‌ನ ಆಡಳಿತ ಮಂಡಳಿ ತಿಳಿಸಿದೆ.
46 ಸ್ಥಾನ ಏರಿಕೆ ಕಂಡು 131ನೇ ಸ್ಥಾನದಲ್ಲಿರುವ ಕೊಸಾವೊ ಅತ್ಯಂತ ಹೆಚ್ಚು ರ್ಯಾಂಕಿಂಗ್ ಏರಿಕೆ ಕಂಡ ದೇಶವಾಗಿದೆ.







