ರಿಯಲ್ ಮ್ಯಾಡ್ರಿಡ್ ಫೈನಲ್‌ಗೆ ತೇರ್ಗಡೆ
ಗ್ಯಾರೆತ್ ಬೇಲ್ ಹ್ಯಾಟ್ರಿಕ್ ಗೋಲು

ಕ್ಲಬ್ ವಿಶ್ವಕಪ್
ಅಬುಧಾಬಿ, ಡಿ.20: ಗ್ಯಾರೆತ್ ಬೇಲ್ ಗಳಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಕ್ಲಬ್ ಫುಟ್ಬಾಲ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಕಾಶಿಮಾ ಅಂಟ್ಲೆರ್ಸ್ ತಂಡವನ್ನು 3-1 ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಯಿತು. ಯುರೋಪಿಯನ್ ಚಾಂಪಿಯನ್ ಮ್ಯಾಡ್ರಿಡ್ ಅಬುಧಾಬಿಯಲ್ಲಿ ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಆತಿಥೇಯ ಅಲ್ ಐನ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಮ್ಯಾಡ್ರಿಡ್ ಸತತ ಮೂರನೇ ಕ್ಲಬ್ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ.
ಜಪಾನ್ ತಂಡ ಪಂದ್ಯ ಆರಂಭವಾಗಿ ಎರಡು ನಿಮಿಷ ಕಳೆಯುವಷ್ಟರಲ್ಲಿ ಗೋಲು ಗಳಿಸಲು ಯತ್ನಿಸಿತು. ಆದರೆ, ರಿಯಲ್ ಮ್ಯಾಡ್ರಿಡ್ ಗೋಲ್‌ಕೀಪರ್ ಥಿಬೌಟ್ ಕೊರ್ಟಿಯಸ್, ಕಾಶಿಮಾ ತಂಡದ ಸರ್ಗಿನ್ಹೊ ಅವರ ಗೋಲುಗಳಿಸುವ ಯತ್ನವನ್ನು ವಿಫಲಗೊಳಿಸಿದರು.
ಮೊಣಕೈ ನೋವಿನಿಂದಾಗಿ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನ ಮೂಡಿಸಿದ್ದ ಬೇಲ್ 44ನೇ ನಿಮಿಷದಲ್ಲಿ ಎಡಗಾಲಿನಿಂದ ಚೆಂಡನ್ನು ಒದ್ದು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಮ್ಯಾಡ್ರಿಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು.
ಬೇಲ್ 53ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಮ್ಯಾಡ್ರಿಡ್ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಎರಡು ನಿಮಿಷ ಉರುಳಿದ ಬಳಿಕ ಎಡಗಾಲಿನಿಂದ ಚೆಂಡನ್ನು ಗೋಲು ಬಲೆಗೆ ಬೀಳಿಸಿದ ಬೇಲ್ ಮ್ಯಾಡ್ರಿಡ್‌ಗೆ 3-0 ಮುನ್ನಡೆ ಒದಗಿಸಿಕೊಟ್ಟರು. ಹ್ಯಾಟ್ರಿಕ್ ಗೋಲು ಗಳಿಸಿದ ಸಾಧನೆಯನ್ನೂ ಮಾಡಿದರು.
ಬೇಲ್ ಇದೀಗ ಟೂರ್ನಮೆಂಟ್‌ನಲ್ಲಿ ಒಟ್ಟು ಆರು ಗೋಲುಗಳನ್ನು ಬಾರಿಸಿದ್ದಾರೆ. ಮಾಜಿ ಸಹ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(7 ಗೋಲು)ಗಿಂತ ಒಂದು ಗೋಲು ಹಿಂದಿದ್ದಾರೆ.
ಏಶ್ಯನ್ ಚಾಂಪಿಯನ್ ಕಾಶಿಮೊ ತಂಡ 78ನೇ ನಿಮಿಷದಲ್ಲಿ ಸಮಾಧಾನಕರ ಗೋಲು ಬಾರಿಸಿತು. ಶೊಮಾ ಡೊಯ್ ತಂಡದ ಪರ ಏಕೈಕ ಗೋಲು ಗಳಿಸಿದರು.
ಜೆ-ಲೀಗ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಕಾಶಿಮಾ ತಂಡ ಶನಿವಾರ ಮೂರನೇ ಸ್ಥಾನಕ್ಕಾಗಿ ನಡೆಯುವ ಪ್ಲೇ-ಆಫ್ ಪಂದ್ಯದಲ್ಲಿ ದಕ್ಷಿಣ ಏಶ್ಯ ಚಾಂಪಿಯನ್ ರಿವರ್ ಪ್ಲೇಟ್ ತಂಡವನ್ನು ಎದುರಿಸಲಿದೆ. ‘‘ಅವರು(ಬೇಲ್)ಅತ್ಯುತ್ತಮ ಪಂದ್ಯ ಆಡಿದರು. ತನ್ನ ಸಾಮರ್ಥ್ಯವೇನು, ತಾನೇನು ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ’’ ಎಂದು ರಿಯಲ್ ಮ್ಯಾಡ್ರಿಡ್ ಕ್ಲಬ್ ಕೋಚ್ ಸ್ಯಾಂಟಿಯಾಗೊ ಸೊಲಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.







