‘ಆಟದಲ್ಲಿ ಭಾವೋದ್ರೇಕ ಅಗತ್ಯ’: ಕೊಹ್ಲಿ ಬೆಂಬಲಿಸಿದ ಅಲನ್ ಬಾರ್ಡರ್

ಮೆಲ್ಬೋರ್ನ್, ಡಿ.20: ಆಟದಲ್ಲಿ ತಮ್ಮ ನಡವಳಿಕೆಯಿಂದ ಟೀಕೆಗೆ ಒಳಗಾಗುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೆಂಬಲಕ್ಕೆ ಆಸೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲನ್ ಬಾರ್ಡರ್ ಧಾವಿಸಿದ್ದು, ಕೊಹ್ಲಿ ಅವರ ಚೇಷ್ಟೆ ಹೆಚ್ಚಾಗಿರಬಹುದು, ಆದರೆ ಭಾವೋದ್ರೇಕ ತೋರ್ಪಡಿಸುವ ಗುಣದ ಆಟಗಾರ ಪಂದ್ಯಕ್ಕೆ ಅಗತ್ಯ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಪರ್ತ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅವರು ಕಾಂಗರೂ ಪಡೆಯ ನಾಯಕ ಟಿಮ್ ಪೈನ್ ಜೊತೆ ವಾಗ್ವಾದ ನಡೆಸಿದ್ದರು. ಅಲ್ಲದೆ ಒಂದು ಹಂತದಲ್ಲಿ ಅಂಪೈರ್ ಮಧ್ಯಪ್ರವೇಶ ಮಾಡಬೇಕಾಯಿತು.
ಇದೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ 123 ರನ್ ಗಳಿಸಿ ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಪ್ರೇಕ್ಷಕರು ಅವರಿಗೆ ಮೆಚ್ಚುಗೆ ಸೂಚಿಸಿದಾಗ ಕೃತಜ್ಞತೆ ಸೂಚಿಸಲಿಲ್ಲ ಹಾಗೂ ಆಸ್ಟ್ರೇಲಿಯ ನಾಯಕ ಟಿಮ್ ಪೈನ್ ಕೈಕುಲುಕಿದಾಗ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಆಸೀಸ್ ಮಾಜಿ ಆಟಗಾರ ಮಿಚೆಲ್ ಜಾನ್ಸನ್ ಕೂಡ ಕೊಹ್ಲಿಯನ್ನು ಟೀಕಿಸಿದ್ದರು.
ಖ್ಯಾತ ಬಾಲಿವುಡ್ ನಟ ನಾಸಿರುದ್ದೀನ್ ಶಾ ಕೂಡ ಇತ್ತೀಚೆಗೆ ಕೊಹ್ಲಿ ವರ್ತನೆಗೆ ಟೀಕೆ ವ್ಯಕ್ತಪಡಿಸಿದ್ದರು.
ಆದರೆ ಸದ್ಯ ಅಲನ್ ಬಾರ್ಡರ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದು, ಕೊಹ್ಲಿಯಂತಹ ಗುಣವುಳ್ಳ ಆಟಗಾರ ಪಂದ್ಯಕ್ಕೆ ಅಗತ್ಯವಿದೆ. ಭಾವೋದ್ರೇಕ ಹೊಂದಿರುವ ಆಟಗಾರರನ್ನು ನೋಡುವುದೇ ಚೆಂದ ಎಂದು ಗುರುವಾರ ಕ್ರಿಕೆಟ್ ವೆಬ್‌ಸೈಟ್‌ವೊಂದಕ್ಕೆ ಹೇಳಿದ್ದಾರೆ.







