ಜನಮನ ಗೆದ್ದ ಸಾಂತಾಕ್ಲಾಸ್ ಒಬಾಮಾ
ಕ್ರಿಸ್‌ಮಸ್‌ಗೆ ದಿನಗಣನೆ ಆರಂಭವಾಗಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಸಾಂತಾ ಕ್ಲಾಸ್ ಉಡುಗೆಯಲ್ಲಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದ್ದು, ಜನಮನ ಗೆದ್ದಿದೆ. ಒಬಾಮಾ ಕ್ರಿಸ್‌ಮಸ್ ನಿಮಿತ್ತ ಸಾಂತಾ ಕ್ಲಾಸ್‌ನಂತೆ ಟೊಪ್ಪಿ ಧರಿಸಿ, ಕೈಯಲ್ಲಿ ಉಡುಗೊರೆಗಳ ಜೋಳಿಗೆ ಹಿಡಿದು ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮಕ್ಕಳ ಆಸ್ಪತ್ರೆಗೆ ತೆರಳಿದ್ದಾರೆ. ಕಾರಿಡಾರ್ ಮೇಲೆ ಸಾಮಾನ್ಯ ಜನರಂತೆ ನಡೆದಾಡಿ, ಅಲ್ಲಿ ಕಾಯಿಲೆಯಿಂದ ದಾಖಲಾಗಿರುವ ಮಕ್ಕಳಿಗೆ ಅಪ್ಪುಗೆ ನೀಡಿ, ಶುಭಾಶಯ ಕೋರಿದ್ದಾರೆ. ಹಾಗೆ ಉಡುಗೊರೆಗಳನ್ನು ನೀಡಿ ಸಂತಸ ಹಂಚಿಕೊಂಡಿದ್ದಾರೆ. ಈ ವೇಳೆ ಮಕ್ಕಳ ಕೇಕೆ, ಖುಷಿಯ ಕೂಗಾಟಗಳೂ ಜೋರಾಗಿತ್ತು. ಇದೆಲ್ಲ ಕ್ಷಣಗಳನ್ನೂ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. ಈಗಾಗಲೇ ವಿಡಿಯೋವನ್ನು 2.9 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಒಬಾಮಾ ಅವರ ಪ್ರೀತಿ ತುಂಬಿದ ಈ ಕೆಲಸಕ್ಕೆ ಪ್ರಶಂಸೆಗಳ ಸುರಿಮಳೆಯೇ ಬಂದಿದೆ.
Next Story





