ಜಿನ್ನಾ ಹೌಸ್ ಮೇಲೆ ಪಾಕಿಸ್ತಾನಕ್ಕೆ ಹಕ್ಕಿಲ್ಲ: ರವೀಶ್ ಕುಮಾರ್
![ಜಿನ್ನಾ ಹೌಸ್ ಮೇಲೆ ಪಾಕಿಸ್ತಾನಕ್ಕೆ ಹಕ್ಕಿಲ್ಲ: ರವೀಶ್ ಕುಮಾರ್ ಜಿನ್ನಾ ಹೌಸ್ ಮೇಲೆ ಪಾಕಿಸ್ತಾನಕ್ಕೆ ಹಕ್ಕಿಲ್ಲ: ರವೀಶ್ ಕುಮಾರ್](https://www.varthabharati.in/sites/default/files/images/articles/2018/12/21/169006.jpg)
ಹೊಸದಿಲ್ಲಿ, ಡಿ. 21: ಮುಂಬೈನ ಜಿನ್ನಾಹೌಸ್ ಮೇಲೆ ಪಾಕಿಸ್ತಾನ ಹಕ್ಕು ಪ್ರತಿಪಾದಿಸಿದರೂ, ಇಸ್ಲಾಮಾಬಾದ್ಗೆ ಈ ಆಸ್ತಿಯ ಮೇಲೆ ಯಾವ ಹಕ್ಕೂ ಇಲ್ಲ. ಈ ಆಸ್ತಿ ಸಂಪೂರ್ಣ ಭಾರತಕ್ಕೆ ಸೇರಿದ್ದು ಎಂದು ಸರ್ಕಾರ ಗುರುವಾರ ಘೋಷಿಸಿದೆ.
"ಈ ಆಸ್ತಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಯಾವ ಹಕ್ಕೂ ಇಲ್ಲ. ಇದು ಭಾರತ ಸರ್ಕಾರದ ಆಸ್ತಿ ಹಾಗೂ ಇದನ್ನು ನವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ದೆಹಲಿಯ ಹೈದ್ರಾಬಾದ್ಹೌಸ್ ಮಾದರಿಯಲ್ಲಿ ಬಳಸಲಾಗುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
"ಇಲ್ಲಿ ಪಾಕಿಸ್ತಾನದ ವಿಚಾರ ಉದ್ಭವಿಸುವುದೇ ಇಲ್ಲ. ನಮ್ಮ ನಿಲುವು ಸ್ಪಷ್ಟ. ಇದು ನಮ್ಮ ಆಸ್ತಿ ಹಾಗೂ ಇದರ ಬಗ್ಗೆ ಯಾರೂ ಹಕ್ಕು ಪ್ರತಿಪಾದಿಸುವಂತಿಲ್ಲ. ಈ ಬಗ್ಗೆ ನಾವು ಹೋರಾಡಬೇಕಿದೆ ಎನ್ನುವುದು ನನ್ನ ಅಭಿಪ್ರಾಯ" ಎಂದು ಹೇಳಿದರು.
ಈ ಆಸ್ತಿಯನ್ನು ತನಗೆ ವರ್ಗಾಯಿಸುವಂತೆ ಪಾಕಿಸ್ತಾನ ಆಗ್ರಹಿಸುತ್ತಿದ್ದು, ತಮ್ಮ ಮುಂಬೈ ರಾಯಭಾರ ಕಚೇರಿಗೆ ಈ ಜಾಗ ನೀಡುವಂತೆ ಒತ್ತಾಯಿಸಿದೆ.
"ಜಿನ್ನಾಹೌಸ್ ಆಸ್ತಿ ಪಾಕಿಸ್ತಾನಕ್ಕೆ ಸೇರಿದ್ದು, ಈ ಕಟ್ಟಡವನ್ನು ಭಾರತ ತನ್ನ ನಿಯಂತ್ರಣಕ್ಕೆ ಪಡೆಯಲು ಮುಂದಾದರೆ ಅದನ್ನು ಪಾಕಿಸ್ತಾನ ಒಪ್ಪುವುದಿಲ್ಲ" ಎಂದು ಪಾಕಿಸ್ತಾನ ಹೇಳಿಕೆ ನೀಡಿರುವ ಬೆನ್ನಲ್ಲೇ ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ.
"ಜಿನ್ನಾ ಹೌಸ್ ಬಗ್ಗೆ ನಾವು ಹಕ್ಕು ಪ್ರತಿಪಾದಿಸಿದ್ದೇವೆ. ಅದನ್ನು ತಮ್ಮ ವಶಕ್ಕೆ ಪಡೆಯಲು ಯಾರೇ ಪ್ರಯತ್ನಿಸಿದರೂ ಅದನ್ನು ನಾವು ಒಪ್ಪುವುದಿಲ್ಲ. ಈ ಆಸ್ತಿ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಭಾರತ ಈಗಾಗಲೇ ಒಪ್ಪಿಕೊಂಡಿದೆ. ಇದಕ್ಕೆ ನಮ್ಮಲ್ಲಿ ದಾಖಲೆ ಇದೆ" ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಹಮ್ಮದ್ ಫೈಝಲ್ ಹೇಳಿದ್ದರು.