ಮೋದಿಗೆ ಪೇಚು ತಂದ ಮಧ್ಯಮವರ್ಗ ಕುರಿತ ಬಿಜೆಪಿ ಕಾರ್ಯಕರ್ತರ ಪ್ರಶ್ನೆ
ಹೊಸದಿಲ್ಲಿ,ಡಿ.21: ತಮಿಳುನಾಡಿನ ಬಿಜೆಪಿ ಕಾರ್ಯಕರ್ತರ ಜತೆ ಸಂವಾದ ನಡೆಸುವ ವೇಳೆ ಕಾರ್ಯಕರ್ತರು ಕೇಳಿದ ಪ್ರಶ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪೇಚಿಗೆ ಸಿಲುಕಿಸಿದ ಅಪರೂಪದ ಘಟನೆ ವರದಿಯಾಗಿದೆ.
ಕೇಂದ್ರ ಸರ್ಕಾರ ಮಧ್ಯಮ ವರ್ಗದವರಿಂದ ತೆರಿಗೆ ಸಂಗ್ರಹಿಸುವುದರಲ್ಲಿ ನಿರತವಾಗಿದೆಯೇ ವಿನಃ ಅವರ ಕಾಳಜಿ ಬಗ್ಗೆ ಏಕೆ ಆಸಕ್ತಿ ವಹಿಸುತ್ತಿಲ್ಲ ಎಂಬ ಪ್ರಶ್ನೆ ಕಾರ್ಯಕರ್ತರಿಂದ ಎದುರಾದಾಗ ಒಂದು ಕ್ಷಣ ಮೋದಿ ತಡವರಿಸಿದರು.
ವಿಳ್ಳುಪುರಂ ಜಿಲ್ಲೆಯ ನಿರ್ಮಲ್ ಕುಮಾರ್ ಜೈನ್ ಎಂಬುವವರು ಈ ಪ್ರಶ್ನೆ ಕೇಳಿದಾಗ ಈ ಪ್ರಶ್ನೆಗೆ ಉತ್ತರಿಸದೇ, ಪುದುಚೇರಿ ಕಾರ್ಯಕರ್ತರ ಜತೆಗಿನ ಸಂವಾದಕ್ಕೆ ತಿರುಗಿದರು. ತಮಿಳುನಾಡು ಹಾಗೂ ಪುದುಚೇರಿಯ ಉತ್ತರ ಜಿಲ್ಲೆಗಳ ಕಾರ್ಯಕರ್ತರ ಜತೆ ಮೋದಿ ಸಂವಾದ ನಡೆಸುತ್ತಿದ್ದಾಗ ಈ ಪ್ರಸಂಗ ಎದುರಾಯಿತು.
ಈ ಸಂವಾದಕ್ಕೆ ಕೇಸರಿ ಪಕ್ಷವೇ ಕಾರ್ಯಕರ್ತರನ್ನು ಆಯ್ಕೆ ಮಾಡಿದ್ದರಿಂದ ಮೋದಿಗೆ ಗಂಭೀರ ಅವಮಾನ ಆದಂತಾಯಿತು. ಸಹ ಕಾರ್ಯಕರ್ತರಿಂದ ಅಪಾಯದ ಮುನ್ಸೂಚನೆ ಅರಿತ ಜೈನ್, ಕಾರ್ಯಕ್ರಮ ಮುಕ್ತಾಯಕ್ಕೆ ಮುನ್ನವೇ ಜಾಗ ಖಾಲಿ ಮಾಡಿದರು. ಮೋದಿ ನಮೋ ಆ್ಯಪ್ ಮೂಲಕ ಬೂತ್ ಮಟ್ಟದ ಕಾರ್ಯಕರ್ತರ ಜತೆ ಸಂವಾದ ನಡೆಸುತ್ತಿದ್ದಾರೆ.