ಮೊದಲು ದಲಿತ, ನಂತರ ಮುಸ್ಲಿಮನಾದ ಹನುಮಂತನನ್ನು ಈಗ ಜಾಟ್ ಆಗಿಸಿದ ಉ.ಪ್ರ ಸಚಿವ

ಲಕ್ಷ್ಮೀ ನಾರಾಯಣ ಚೌಧುರಿ
ಲಕ್ನೋ,ಡಿ.21 : ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಹನುಮಂತ ಒಬ್ಬ ದಲಿತನಾಗಿದ್ದ ಎಂದು ಹೇಳಿ ವಿವಾದಕ್ಕೀಡಾದರೆ ನಿನ್ನೆಯಷ್ಟೇ ಅವರದೇ ಪಕ್ಷದ ವಿಧಾನ ಪರಿಷತ್ ಸದಸ್ಯ ಬುಕ್ಕಲ್ ನವಾಬ್ ಅವರು ಹನುಮಾನ್ ಮುಸ್ಲಿಮನಾಗಿದ್ದ ಎಂದು ಬಿಟ್ಟರು. ಇದೀಗ ಈ ಪಟ್ಟಿಗೆ ಇನ್ನೊಬ್ಬರ ಸೇರ್ಪಡೆಯಾಗಿದೆ. ಉತ್ತರ ಪ್ರದೇಶ ಸಚಿವ ಲಕ್ಷ್ಮೀ ನಾರಾಯಣ ಚೌಧುರಿ ಅವರ ಪ್ರಕಾರ ಹನುಮಾನ್ ಜಾಟ ಸಮುದಾಯದವನು.. ಜಾಟ ಸಮುದಾಯದವರ ವ್ಯಕ್ತಿತ್ವವನ್ನೇ ಹನುಮಾನ್ ಹೋಲುತ್ತಾನೆ ಎನ್ನುತ್ತಾರೆ ಚೌಧುರಿ,
``ನನಗನಿಸುತ್ತದೆ ಹನುಮಾನ್ ಜಿ ಒಬ್ಬ ಜಾಟ್ ಸಮುದಾಯದವರಾಗಿದ್ದರು. ಯಾರಾದರೂ ಕಷ್ಟದಲ್ಲಿರುವವರನ್ನು ಜಾಟ್ ವ್ಯಕ್ತಿಯೊಬ್ಬ ನೋಡಿದರೆ ಆತ (ಹನುಮಂತನಂತೆ) ಆ ವಿಚಾರ ಅಥವಾ ಜನರ ಬಗ್ಗೆ ತಿಳಿಯದೆ ಧುಮುಕಿ ಬಿಡುತ್ತಾನೆ,'' ಎಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಚಿವರು ಹೇಳಿದರು.
``ಹನುಮಂತನ ವರ್ತನೆ ಜಾಟರ ವರ್ತನೆಯಂತೆಯೇ ಇದೆ. ಏಕೆಂದರೆ ಸೀತೆಯನ್ನು ರಾವಣ ಅಪಹರಿಸಿದ ನಂತರ ಆತ ಕೂಡಲೇ ರಾಮನ ಸಹಾಯಕ್ಕೆ ಬಂದಿದ್ದ,'' ಎಂದು ಚೌಧುರಿ ಹೇಳಿದರು.
ಧಾರ್ಮಿಕ ವ್ಯವಹಾರಗಳ, ಹೈನು ಅಭಿವೃದ್ಧಿ, ಸಂಸ್ಕೃತಿ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವರೂ ಆಗಿರುವ ಅವರು ಮುಂದುವರಿದು ``ಸನಾತನ ಧರ್ಮವನ್ನು ನಂಬುವ ಎಲ್ಲರೂ ಹನುಮಂತನನ್ನು ಖಂಡಿತ ಆರಾಧಿಸುತ್ತಾರೆ,'' ಎಂದು ತಿಳಿಸಿದರು.





