‘ಸತ್ತು ಅಂತ್ಯಕ್ರಿಯೆ’ ನಡೆದಿದ್ದರೂ ಮತ್ತೆ ಪ್ರತ್ಯಕ್ಷಳಾದ ಯುವತಿ !
ಪಟಿಯಾಲ,ಡಿ.21 : ಇಪ್ಪತ್ತಾರು ವರ್ಷದ ನೈನಾಳ ಅಂತ್ಯಕ್ರಿಯೆಯನ್ನು ಆಕೆಯ ಕುಟುಂಬಸ್ಥರು ಡಿಸೆಂಬರ್ 15ರಂದು ನೆರವೇರಿಸಿದ್ದರು. ಆದರೆ ಬುಧವಾರ ಆಕೆ ಪ್ರತ್ಯಕ್ಷಳಾದಾಗ ಕುಟುಂಬ ಸದಸ್ಯರಿಗೆ ಆಘಾತವಾದರೂ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಈ ಘಟನೆಯ ಹಿನ್ನೆಲೆ ಹೀಗಿದೆ. ನೈನಾ ಪಟಿಯಾಲದವಳಾಗಿದ್ದು ಚಮ್ಕೌರ್ ಸಾಹಿಬ್ ಎಂಬಲ್ಲಿನ ಯುವಕನ ಜತೆಗೆ ಆಕೆಯ ವಿವಾಹವನ್ನು ನೆರವೇರಿಸಲಾಗಿತ್ತು. ಆದರೆ ಡಿಸೆಂಬರ್ 8ರಂದು ಆಕೆ ನಾಪತ್ತೆಯಾಗಿದ್ದಳು. ಡಿಸೆಂಬರ್ 11ರಂದು ಸ್ಥಳೀಯ ರೈತ ಜಿವನ್ ಸಿಂಗ್ ಎಂಬಾತನ ಗದ್ದೆಯಲ್ಲಿ ಗೋಣಿ ಚೀಲದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಗುರುತು ಪತ್ತೆ ಹಚ್ಚಲಾಗದ ಸ್ಥಿತಿಯಲ್ಲಿದ್ದ ಆ ಮೃತದೇಹ 20ರ ಅಸುಪಾಸಿನ ಯುವತಿಯದ್ದೆಂದು ತಿಳಿದು ಬಂದಿತ್ತು. ನೈನಾಳ ಕುಟುಂಬ ಅದು ನೈನಾಳದ್ದೆಂದು ಗುರುತಿಸಿದ ಕಾರಣ ಪೋಸ್ಟ್ ಮಾರ್ಟಂ ನಂತರ ಮೃತದೇಹವನ್ನು ಅವರಿಗೆ ಹಸ್ತಾಂತರಿಸಿ ಡಿಸೆಂಬರ್ 15ರಂದು ಅಂತ್ಯಕ್ರಿಯ ನಡೆದಿತ್ತು.
ನೈನಾ ತನ್ನ ಗಂಡನ ಮನೆಯಿಂದ ತನ್ನ ಪ್ರಿಯಕರನ ಜತೆ ನಾಪತ್ತೆಯಾಗಿದ್ದಾಗಿ ಹಾಗೂ ಆತ ಆಕೆಯನ್ನು ಕೊಲೆಗೈದಿದ್ದಾಗಿ ಆಕೆಯ ಕುಟುಂಬಸ್ಥರು ಈ ಹಿಂದೆ ನಂಬಿದ್ದರು. ಆದರೆ ಬುಧವಾರ ಆಕೆ ತಾನು ಪರಾರಿಯಾದ ಪ್ರಿಯಕರನ ಜತೆಗೇ ಹಾಜರಾಗಿದ್ದಳು.
ಹಾಗಾದರೆ ಮೃತ ಯುವತಿ ಯಾರೆಂದು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ಈಗ ನಿರತರಾಗಿದ್ದಾರೆ.