ಹಿಮೋಗ್ಲೋಬಿನ್ ಪರೀಕ್ಷೆಯ ಮಹತ್ವ ನಿಮಗೆ ಗೊತ್ತೇ?

ಹಿಮೋಗ್ಲೋಬಿನ್ ಕೆಂಪು ರಕ್ತಕಣ(ಆರ್‌ಬಿಸಿ)ಗಳಲ್ಲಿರುವ,ಕಬ್ಬಿಣಾಂಶವನ್ನು ಒಳಗೊಂಡಿರುವ ಪ್ರೋಟಿನ್ ಆಗಿದೆ. ಈ ಹಿಮೋಗ್ಲೋಬಿನ್‌ನಿಂದಾಗಿಯೇ ರಕ್ತವು ಕೆಂಪುವರ್ಣವನ್ನು ಹೊಂದಿದೆ. ಶರೀರದ ವಿವಿಧ ಅಂಗಾಂಗಗಳಿಗೆ ಆಮ್ಲಜನಕದ ಪೂರೈಕೆಗೆ ಹಿಮೋಗ್ಲೋಬಿನ್ ಅಗತ್ಯವಾಗಿದೆ. ನಾವು ಉಸಿರಾಡಿದಾಗ ರಕ್ತದಲ್ಲಿಯ ಹಿಮೋಗ್ಲೋಬಿನ್ ಶ್ವಾಸಕೋಶಗಳಿಂದ ಆಮ್ಲಜನಕವನ್ನು ಶರೀರದ ಎಲ್ಲ ಅಂಗಾಂಗಗಳಿಗೆ ಪೂರೈಸುತ್ತದೆ ಮತ್ತು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
►ಏನಿದು ಹಿಮೋಗ್ಲೋಬಿನ್ ಪರೀಕ್ಷೆ?
ಹೆಸರೇ ಸೂಚಿಸುವಂತೆ ಈ ಪರೀಕ್ಷೆಯು ರಕ್ತದಲ್ಲಿಯ ಹಿಮೋಗ್ಲೋಬಿನ್ ಪ್ರಮಾಣವನ್ನು ಅಳೆಯುತ್ತದೆ. ಇದನ್ನು ಎಚ್‌ಬಿ ಟೆಸ್ಟ್ ಅಥವಾ ಎಚ್‌ಜಿಬಿ ಟೆಸ್ಟ್ ಎಂದೂ ಕರೆಯಲಾಗುತ್ತದೆ.
ಮಾಮೂಲಿ ವೈದ್ಯಕೀಯ ತಪಾಸಣೆಯ ಭಾಗವಾಗಿ,ಆರ್‌ಬಿಸಿಗಳಿಗೆ ಹಾನಿಯನ್ನುಂಟು ಮಾಡಿರುವ ಅನಾರೋಗ್ಯದ ತಪಾಸಣೆಗಾಗಿ,ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದೆಯೋ ಅಥವಾ ಕಡಿಮೆಯಿದೆಯೋ ಎನ್ನುವುದನ್ನು ತಿಳಿದುಕೊಳ್ಳಲು,ಕೆಲವು ಚಿಕಿತ್ಸೆಗಳಿಗೆ ಶರೀರದ ಪ್ರತಿಕ್ರಿಯೆಯ ಮೆಲೆ ನಿಗಾಯಿರಿಸಲು ಇತ್ಯಾದಿ ಕಾರಣಗಳಿಂದಾಗಿ ಹಿಮೋಗ್ಲೋಬಿನ್ ಪರೀಕ್ಷೆಯನ್ನು ನಡೆಸಲಾಗುತ್ತದೆ.
► ಹಿಮೋಗ್ಲೋಬಿನ್ ಪರೀಕ್ಷೆ ಯಾವಾಗ ಅಗತ್ಯ?
ನಿಶ್ಶಕ್ತಿ,ತಲೆ ಸುತ್ತುವಿಕೆ,ಪೇಲವ ಚರ್ಮ,ಶೀತಲ ಕೈಗಳು ಮತ್ತು ಪಾದಗಳು ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡಿದ್ದರೆ, ನಿಮ್ಮ ಹೆತ್ತವರು ಅಥವಾ ನಿಕಟ ರಕ್ತಸಂಬಂಧಿಗಳು ರಕ್ತಕ್ಕೆ ಸಂಬಂಧಿಸಿದ ಯಾವುದೇ ರೋಗಕ್ಕೆ ಗುರಿಯಾಗಿದ್ದಿದ್ದರೆ,ನಿಮ್ಮ ಆಹಾರದಲ್ಲಿ ಕಬ್ಬಿಣ ಮತ್ತು ಖನಿಜಗಳ ಕೊರತೆಯಿದ್ದರೆ,ನೀವು ದೀರ್ಘ ಕಾಲದಿಂದ ಸೋಂಕಿನಿಂದ ಬಳಲುತ್ತಿದ್ದರೆ, ಗಾಯ ಅಥವಾ ಶಸ್ತ್ರಚಿಕಿತ್ಸೆಯಿಂದ ವಿಪರೀತ ರಕ್ತಸ್ರಾವವಾಗಿದ್ದರೆ ಈ ಪರೀಕ್ಷೆ ಅಗತ್ಯವಾಗುತ್ತದೆ. ಗರ್ಭಿಣಿಯರಿಗೂ ವೈದ್ಯರು ಈ ಪರೀಕ್ಷೆಯನ್ನು ಶಿಫಾರಸು ಮಾಡುತ್ತಾರೆ.
ಹಿಮೋಗ್ಲೋಬಿನ್ ಪರೀಕ್ಷೆಗೆ ಯಾವುದೇ ವಿಶೇಷ ಸಿದ್ಧತೆಗಳು ಅಗತ್ಯವಿಲ್ಲ. ನೀವು ಆಹಾರ ಸೇವಿಸಿರಲಿ ಅಥವಾ ಸೇವಿಸದಿರಲಿ,ದಿನದ ಯಾವುದೇ ಸಮಯದಲ್ಲಿ ಈ ಪರೀಕ್ಷೆಗಾಗಿ ರಕ್ತದ ಸ್ಯಾಂಪಲ್‌ನ್ನು ನೀಡಬಹುದು.
ನಿಮ್ಮಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ ನೀವು ರಕ್ತಹೀನತೆಯಿಂದ ಬಳಲುತ್ತಿರಬಹುದು. ಈ ಸ್ಥಿತಿಯಲ್ಲಿ ಶರೀರದಲ್ಲಿ ಆರ್‌ಬಿಸಿಗಳು ಸಾಕಷ್ಟು ಪ್ರಮಾಣದಲ್ಲಿರುವುದಿಲ್ಲ ಮತ್ತು ನಿಮ್ಮ ದೈಹಿಕ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
ಹಿಮೋಗ್ಲೋಬಿನ್ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿದ್ದರೆ ನೀವು ಪಾಲಿಸಿಥೆಮಿಯಾ ಎಂಬ ಸ್ಥಿತಿಯಿಂದ ಬಳಲುತ್ತಿರಬಹುದು. ಇದು ಶರೀರದಲ್ಲಿ ಆರ್‌ಬಿಸಿಗಳು ಹೆಚ್ಚಿನ ಪ್ರಮಾಣದಲ್ಲಿರುವ ಸ್ಥಿತಿಯಾಗಿದೆ.
ಉಸಿರಾಟದಲ್ಲಿ ತೊಂದರೆ,ಬಳಲಿಕೆ,ನಿಶ್ಶಕ್ತಿ ಮತ್ತು ತಲೆ ಸುತ್ತುವುದು,ತಲೆನೋವು,ಮೈ ತಣ್ಣಗಾದ ಅನುಭವ,ಪೇಲವ ಚರ್ಮ,ವಸಡುಗಳಲ್ಲಿ ಉರಿಯೂತ,ತಲೆಗೂದಲು ಉದುರುವುದು ಇವು ರಕ್ತಹೀನತೆಯ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.
ತುರಿಕೆ,ಪದೇ ಪದೇ ತಲೆನೋವು,ಅತಿಯಾಗಿ ಬೆವರುವಿಕೆ,ಅನಿರೀಕ್ಷಿತ ತೂಕನಷ್ಟ,ತಲೆ ಸುತ್ತುವಿಕೆ ಮತ್ತು ಬಳಲಿಕೆ,ಚರ್ಮದ ಬಣ್ಣ ನೇರಳೆ ಅಥವಾ ಕೆಂಪು ಛಾಯೆಗೆ ತಿರುಗುವದು, ಸುಲಭದಲ್ಲಿ ಮತ್ತು ಆಗಾಗ್ಗೆ ತರಚಿದಂತಹ ಗಾಯಗಳಾಗುವುದು,ದೃಷ್ಟಿಯಲ್ಲಿ ಬದಲಾವಣೆ ಇವು ಪಾಲಿಸಿಥೆಮಿಯಾದ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.
ನೆನಪಿಡಿ,ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದ್ದರೆ ಅಥವಾ ಕಡಿಮೆಯಿದ್ದರೆ ಆತಂಕ ಪಟ್ಟುಕೊಳ್ಳಬೇಕಿಲ್ಲ. ಸಾಮಾನ್ಯವಾಗಿ ಇವು ಇತರ ಯಾವುದೇ ಅನಾರೋಗ್ಯವನ್ನು ಸೂಚಿಸುತ್ತವೆ ಎಂದೇನಿಲ್ಲ. ಕೆಲವು ಪ್ರಕರಣಗಳಲ್ಲಿ ಆಹಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು ಮತ್ತು ಚಿಕಿತ್ಸೆ ಅಗತ್ಯವಿರುವುದಿಲ್ಲ. ಹೀಗಾಗಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದ್ದರೆ ಅಥವ ಕಡಿಮೆಯಿದ್ದರೆ ಅದಕ್ಕೆ ನಿಖರ ಕಾರಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.







