'ಟ್ರಾಫಿಕ್ ಜಾಮ್ ತಡೆಯಲು ಖಾಸಗಿ ಬಸ್ ನಿಲ್ದಾಣಗಳು ಸ್ಥಳಾಂತರಗೊಳ್ಳಲಿ'
ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರ ಸಲಹೆ

ಮಂಗಳೂರು, ಡಿ.21: ನಗರದ ಸ್ಟೇಟ್‌ಬ್ಯಾಂಕ್ ಸಮೀಪದಲ್ಲಿರುವ ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣಗಳನ್ನು ಹೊರಗೆ ಸ್ಥಳಾಂತರ ಮಾಡಿದರೆ ಮಾತ್ರ ಟ್ರಾಫಿಕ್ ಜಾಮ್ ತಡೆಯಲು ಸಾಧ್ಯವಿದೆ. ಅದು ಬಿಟ್ಟು ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಟೇಟ್‌ಬ್ಯಾಂಕ್-ಹ್ಯಾಮಿಲ್ಟನ್ ಸರ್ಕಲ್ ಕಡೆಗೆ ತೆರಳುವ ವಾಹನಗಳಿಗೆ ಏಕಮುಖ ಸಂಚಾರ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂಬ ಸಲಹೆಯೊಂದು ಕೇಳಿ ಬಂದಿದೆ.
ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿ ಮಾತನಾಡಿದ ಸದಾಶಿವ ಎಂಬವರು ಇತ್ತೀಚೆಗೆ ನಡೆದ ಆರ್‌ಟಿಎ ಸಭೆಯಲ್ಲಿ ನಗರದ ಸ್ಟೇಟ್‌ಬ್ಯಾಂಕ್‌ಗೆ ತೆರಳುವ ವಾಹನಗಳನ್ನು ಏಕಮುಖ ಸಂಚಾರ ಮಾಡುವ ಬಗ್ಗೆ ಸಲಹೆಗಳು ಬಂದಿದ್ದವು. ಆದರೆ ಇದು ಸೂಕ್ತವಾದುದಲ್ಲ. ಇದರ ಬದಲು ಬಸ್ ನಿಲ್ದಾಣಗಳನ್ನೇ ನಗರದಿಂದ ಹೊರಗೆ ಸ್ಥಳಾಂತರ ಮಾಡಿದರೆ ಟ್ರಾಫಿಕ್, ಫುಟ್‌ಪಾತ್, ಪಾರ್ಕಿಂಗ್ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಬಸ್ ನಿಲ್ದಾಣಗಳನ್ನು ಸ್ಥಳಾಂತರ ಮಾಡಬೇಕು ಎಂಬುದು ಕೂಡ ಪೊಲೀಸ್ ಇಲಾಖೆಯ ಅಭಿಮತವಾಗಿದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಉರ್ವ ಮಾರ್ಕೆಟ್ ನಿವಾಸಿಯೊಬ್ಬರು ಕರೆ ಮಾಡಿ, ಕಾರ್‌ಸ್ಟ್ರೀಟ್, ಬಂಟ್ಸ್‌ಹಾಸ್ಟೆಲ್ ಸಮೀಪ ಫುಟ್‌ಪಾತ್ ಆಕ್ರಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೋಕಟ್ಟೆ ನಿವಾಸಿ ಅಬ್ದುಲ್ ಶಾಫಿ ಕರೆ ಮಾಡಿ, ಅಬ್ದುಲ್ ಸಲಾಂ ಎಂಬವರು ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ಯಾವ ಹಂತದಲ್ಲಿದೆ ಎಂಬುದೂ ಗೊತ್ತಾಗಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಕಮಿಷನರ್ ‘ಕಚೇರಿಗೆ ಬಂದು ಮಾತನಾಡಿ, ಈ ಬಗ್ಗೆ ವಿವರ ನೀಡಲಾಗುವುದು’ ಎಂದರು.
ಕಾವೂರು ಜಂಕ್ಷನ್‌ನಲ್ಲಿ ನಾಲ್ಕು ಕಡೆಯಿಂದ ವಾಹನಗಳು ಬರುತ್ತಿರುವುದರಿಂದ ತೀರಾ ಅಪಘಾತ ವಲಯ ಆಗಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಟ್ರಾಫಿಕ್ ದಟ್ಟಣೆಯಿರುವಾಗ ಈ ಪ್ರದೇಶದಲ್ಲಿ ಟ್ರಾಫಿಕ್ ಸಿಬ್ಬಂದಿ ನೇಮಿಸಿದರೆ ಅವಘಡ ತಡೆಯಲು ಸಾಧ್ಯವಿದೆ ಎಂದು ಮಹಿಳೆಯೊಬ್ಬರು ಸಲಹೆ ನೀಡಿದರು.
ಜೋಕಟ್ಟೆ ರೈಲ್ವೆ ಗೇಟ್ ಬಳಿ ಅಝಾದ್‌ನಗರ ಮತ್ತು ಕೆಂಪುಕೊಳ ಎಂದು ಯಾರೋ ಬೋರ್ಡ್ ಹಾಕಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಈ ಬೋರ್ಡ್ ತೆರವುಗೊಳಿಸಲು ಕ್ರಮ ಕೈಗೊಳ್ಳಿ ಜಾಕಿರ್ ಹುಸೈನ್ ಜೋಕಟ್ಟೆ ಒತ್ತಾಯಿಸಿದರು. ಈ ಬಗ್ಗೆ ತಕ್ಷಣ ಗಮನಹರಿಸುವಂತೆ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದರು.
ಕೊಡಿಕಲ್‌ಗೆ ಪರ್ಮಿಟ್ ಇರುವ 61 ನಂಬರ್ ಬಸ್ ಬರುತ್ತಿಲ್ಲ. ಕೇಳಿದರೆ ರಿಪೇರಿಯಾಗಲು ಬಾಕಿಯಿದೆ ಎನ್ನುತ್ತಾರೆ. ಪರ್ಯಾಯ ಬಸ್ ಕೂಡಾ ಹಾಕಲ್ಲ ಎಂದು ಸಾರ್ವಜನಿಕರೊಬ್ಬರು ನೀಡಿದ ದೂರಿಗೆ ಸ್ಪಂದಿಸಿದ ಕಮಿಷನರ್ ಕೂಡಲೇ ಆ ಬಸ್‌ಗಳ ಪರವಾನಿಗೆ ರದ್ದುಗೊಳಿಸಲು ಆರ್‌ಟಿಒಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೂಡುಬಿದಿರೆಯಲ್ಲಿ ಟ್ರಾಫಿಕ್ ಸೇರಿದಂತೆ ಹಲವೆಡೆ ಹೋಮ್‌ಗಾರ್ಡ್‌ಗಳನ್ನು ನೇಮಿಸಲಾಗಿದೆ. ಆದರೆ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಟ್ರಾಫಿಕ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ಅಮಾನುಲ್ಲಾ, ಎಸ್ಸೈ ರವಿ ಪವಾರ್, ಪಿ. ಯೋಗೇಶ್ವರ, ಎಚ್‌ಸಿ ಪುರುಷೋತ್ತಮ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಉಪಸ್ಥಿತರಿದ್ದರು.
ನ್ಯಾಯ ಕೇಳಿದರೆ ಕ್ರಿಮಿನಲ್ ಕೇಸಾ ?
ವೆನ್ಲಾಕ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಿ ಗ್ರೂಪ್ ನೌಕರರು ವೇತನಕ್ಕೆ ಸಂಬಂಧಿಸಿ ಪ್ರತಿಭಟನೆ ಮಾಡುತ್ತಿದ್ದಾಗ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಸುನೀತಾ ಎಂಬವರು ಅಳಲು ತೋಡಿಕೊಂಡರು. ನಮಗೆ ಅನ್ಯಾಯವಾಗಿದೆ. ಅದರ ವಿರುದ್ಧ ಪ್ರತಿಭಟಿಸಿದ್ದೇವೆ. ನ್ಯಾಯ ಕೇಳಿದ ನಮ್ಮ ಮೇಲೆಯೇ ಇದೀಗ ಕ್ರಿಮಿನಲ್ ಕೇಸಾ ? ನಮಗೆ ನ್ಯಾಯ ಇಲ್ಲವೇ ? ಎಂದು ಸುನೀತಾ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ವೇತನಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆಯಿದ್ದರೂ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ವಿರುದ್ಧ ದೂರು ನೀಡಿ. ಅದು ಬಿಟ್ಟು ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕರಿಗೆ, ರೋಗಿಗಳಿಗೆ ತೊಂದರೆ ಮಾಡುವುದು ಸರಿಯಲ್ಲ. ಹಾಗೇನು ತೊಂದರೆಯಿದ್ದರೆ ನೇರ ಇಲಾಖೆಯ ಪ್ರಮುಖರನ್ನು ಭೇಟಿಯಾಗಿ ಸಮಸ್ಯೆ ತಿಳಿಸಿ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಪೊಲೀಸ್ ಠಾಣೆಗಳಲ್ಲಿ ವಾಹನ ಡಂಪಿಂಗ್ ಯಾಕೆ ?
ನಗರದ ಕೆಲವು ಪೊಲೀಸ್ ಠಾಣೆಯ ಆವರಣದಲ್ಲಿ ಹಲವು ವರ್ಷಗಳ ಹಿಂದೆ ಮುಟ್ಟುಗೋಲು ಹಾಕಲಾದ ನೂರಾರು ವಾಹನಗಳನ್ನು ಕಾಣಬಹುದಾಗಿದೆ. ಕೆಲವು ವಾಹನಗಳು ತುಕ್ಕು ಹಿಡಿದಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬರ್ಕೆ ನಿವಾಸಿಯೊಬ್ಬರು ಅಭಿಪ್ರಾಯಪಟ್ಟರು.
ಇದಕ್ಕೆ ಉತ್ತರಿಸಿದ ಕಮಿಷನರ್ ಟಿ.ಆರ್.ಸುರೇಶ್ ಪೊಲೀಸ್ ಠಾಣೆಗಳಲ್ಲಿರುವ ಬಹುತೇಕ ವಾಹನಗಳ ಪ್ರಕರಣಗಳು ನ್ಯಾಯಾಲಯದಲ್ಲಿವೆ. ನ್ಯಾಯಾಧೀಶರು ಸೂಚನೆ ನೀಡದ ಹೊರತು ನಮಗೆ ಆ ವಾಹನಗಳನ್ನು ಬಿಟ್ಟು ಕೊಡುವಂತಿಲ್ಲ. ನಗರದ ಬಹುತೇಕ ಠಾಣೆಗಳು ಅತ್ಯಂತ ಕಡಿಮೆ ಸ್ಥಳಾವಕಾಶವಿರುವ ಕಡೆ ಕಟ್ಟಲ್ಪಟ್ಟಿವೆ. ಆದಾಗ್ಯೂ ಬೇರೆ ಬೇರೆ ಕಾರಣಕ್ಕೆ ಮುಟ್ಟುಗೋಲು ಹಾಕಲಾದ ವಾಹನಗಳನ್ನು ರಕ್ಷಿಸಿಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಠಾಣೆಯ ಆವರಣದಲ್ಲೇ ಅದನ್ನು ನಿಲ್ಲಿಸಲಾಗಿದೆ. ನ್ಯಾಯಾಲಯ ಅನುಮತಿ ನೀಡಿದೊಡನೆ ಅದನ್ನು ಬಿಟ್ಟು ಕೊಡಲಾಗುತ್ತದೆ. ಆದಾಗ್ಯೂ ಬೇರೆ ಬೇರೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಹೊಸ ವಾಹನಗಳು ಠಾಣೆಯ ಆವರಣ ಸೇರುತ್ತಿರುತ್ತದೆ ಎಂದರು.
ಕೆಲವು ವಾಹನಗಳಿಗೆ ಬಿಡುಗಡೆಗೊಳಿಸಲು ನ್ಯಾಯಾಲಯ ಅನುಮತಿ ನೀಡಿದರೂ ಅದರ ವಾರಸುದಾರರು ಪಡೆದುಕೊಳ್ಳಲು ಬಂದಿಲ್ಲ. ಇನ್ನೊಂದೆಡೆ ಕೆಲವು ವಾಹನಗಳಲ್ಲಿ ವಾಹನ ಮಾಲಕರ ಮಧ್ಯೆಯೂ ಗೊಂದಲವಿದೆ. ಹಕ್ಕುಸ್ವಾಮ್ಯವಿಲ್ಲದ ವಾಹನಗಳನ್ನು ಶೀಘ್ರದಲ್ಲೇ ಟೆಂಡರ್ ಹಾಕಲಾಗುವುದು ಎಂದ ಟಿ.ಆರ್.ಸುರೇಶ್, ಇತ್ತೀಚಿನ ದಿನಗಳಲ್ಲಿ ಅಪಘಾತವಾದ ವಾಹನಗಳನ್ನು ಪೊಲೀಸ್ ಠಾಣೆಗೆ ತರದೆ ಘಟನಾ ಸ್ಥಳದಲ್ಲೇ ಪರಿಶೀಲನೆ ನಡೆಸಿ, ಅದನ್ನು ದಾಖಲೀಕರಣ ಮಾಡಿ ವಾಹನ ವಾರೀಸುದಾರರಿಗೆ ನೀಡಲಾಗುತ್ತಿದೆ ಎಂದರು.
ಪ್ರಮುಖ ಇತರ ಸಮಸ್ಯೆಗಳು
ನಗರದ ಭವಂತಿಸ್ಟ್ರೀಟ್ ರಸ್ತೆಯಲ್ಲಿ ವಾಹನಗಳು ವೇಗವಾಗಿ ಹೋಗುತ್ತಿರುವುದರಿಂದ ಪಾದಚಾರಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಈ ಕಾರಣದಿಂದ ಹಂಪ್ ಅಥವಾ ಝಿಬ್ರಾ ಕ್ರಾಸ್ ಹಾಕಿ.
ಕೊಟ್ಟಾರ ಸೇರಿದಂತೆ ಕೆಲವೆಡೆ ಹೆದ್ದಾರಿಯಲ್ಲೇ ಬ್ಯಾರಿಕೇಟ್ ಹಾಕಿದ್ದು, ಇದರಿಂದ ವಾಹನಗಳಿಗೆ ತೊಂದರೆಯಾಗುತ್ತಿದೆ.
ಮೀನಿನ ಲಾರಿ ನೀರು ಮತ್ತು ಕೊಳೆತ ಮೀನಿನ ತ್ಯಾಜ್ಯ ರಸ್ತೆಗಳಲ್ಲಿ ಬೀಳುವುದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಿ.
ಕುಲಶೇಖರ ಕೈಕಂಬದಲ್ಲಿ ಶನಿವಾರ ಸಂತೆಯ ಕಾರಣ ವಾಹನ ರಸ್ತೆ ಬದಿಯಲ್ಲಿ ವಾಹನ ಪಾರ್ಕ್ ಮಾಡಿ ಅನ್ಯ ವಾಹನಗಳಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
ಸ್ಕೂಲ್ ಬಸ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹಾಕುತ್ತಿದ್ದು, ಈ ಬಗ್ಗೆ ತಪಾಸಣೆ ನಡೆಸಿ ಕ್ರಮಕೈಗೊಳ್ಳಿ.
ವಾಮಂಜೂರು ಪ್ರದೇಶದಲ್ಲಿ ರಾತ್ರಿ ಹೊತ್ತು ಹೈಬೀಮ್ ಲೈಟ್ ಹಾಕಿ ವಾಹನ ಸಂಚಾರ ಮಾಡುವ ಸವಾರರ ವಿರುದ್ಧ ಕ್ರಮಕೈಗೊಳ್ಳಿ.