ಆನ್‌ಲೈನ್ ವಂಚನೆಗೆ ಅಮಾಯಕರ ಬ್ಯಾಂಕ್ ಖಾತೆ ಖರೀದಿ !
ಉತ್ತರ ಭಾರತದಲ್ಲಿ ವಂಚಕರ ಜಾಲ: ಉಡುಪಿ ಪೊಲೀಸ್ ತನಿಖೆಯಿಂದ ಬಯಲು

ಉಡುಪಿ, ಡಿ. 21: ಆನ್‌ಲೈನ್ ಮೂಲಕ ವಂಚಿಸುವ ಜಾಲವೊಂದು ಸಕ್ರೀಯವಾಗಿದ್ದು, ಬಹುತೇಕ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಕಾರ್ಯ ಚರಿಸುತ್ತಿರುವ ಈ ಜಾಲವು ಅಮಾಯಕ ವೃದ್ಧರಿಂದ ಖರೀದಿಸಿದ ಬ್ಯಾಂಕ್ ಖಾತೆಗಳನ್ನು ತಮ್ಮ ವಂಚನೆಗೆ ಬಳಕೆ ಮಾಡುತ್ತಿವೆ ಎಂಬ ಆಘಾತಕಾರಿ ಅಂಶ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಉಡುಪಿಯಲ್ಲಿ ಹಿಂದೆ ನಡೆದ ಆನ್‌ಲೈನ್ ಮೂಲಕ ವಂಚನೆ ಎಸಗಿದ ಪ್ರಕರಣವೊಂದರ ಜಾಡು ಹಿಡಿದು ಉತ್ತರ ಭಾರತಕ್ಕೆ ಹೊರಟ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರ ತಂಡಕ್ಕೆ ಆನ್‌ಲೈನ್ ವಂಚನೆಯ ವಿವಿಧ ಕರಾಳ ಮುಖಗಳು ಬೆಳಕಿಗೆ ಬಂದಿವೆ.
ಆನ್‌ಲೈನ್ ಮೂಲಕ ವಸ್ತುಗಳ ಖರೀದಿ, ಮಗು ದತ್ತು ಪಡೆಯುವ, ಪತಂಜಲಿ ನೊಂದಣಿ ಸೇರಿದಂತೆ ವಿವಿಧ ಅಗತ್ಯಗಳಿಗೆ ನಕಲಿ ವೆಬ್‌ಸೈಟ್‌ಗಳನ್ನು ಸಂಪರ್ಕಿಸುವವರಿಗೆ, ವಂಚಕರು ಮೊದಲು ಬ್ಯಾಂಕ್ ಖಾತೆಯೊಂದಕ್ಕೆ ಮುಂಗಡ ಹಣ ಪಾವತಿಸುವಂತೆ ಸೂಚಿಸಿ, ನಂತರ ಬೇರೆ ಬೇರೆ ಕಾರಣಕ್ಕಾಗಿ ತಾವು ಸೂಚಿಸುವ ಬೇರೆ ಬೇರೆ ಖಾತೆಗಳಿಗೆ ಹಣ ಹಾಕುವಂತೆ ಹೇಳಿ ವಂಚನೆ ಎಸಗುತ್ತಾರೆ. ಹೀಗೆ ಉಡುಪಿಯಲ್ಲಿ ಹಲವು ಪ್ರಕರಣಗಳು ನಡೆದಿದ್ದು, ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
‘ಆನ್‌ಲೈನ್ ವಂಚನೆ ಪ್ರಕರಣದ ಖಾತೆಯ ಆಧಾರದಲ್ಲಿ ತನಿಖೆಯ ಬೆನ್ನು ಹತ್ತಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ತೆರಳಿ, ವಂಚಿಸಲ್ಪಟ್ಟ ಅಲ್ಲಿನ ಬ್ಯಾಂಕ್ ಖಾತೆ ಯನ್ನು ಪರಿಶೀಲಿಸಿದಾಗ ಅವುಗಳು 70ವರ್ಷಕ್ಕಿಂತ ಮೇಲ್ಪಟ್ಟ ಅಮಾಯಕ ವೃದ್ಧರ ಹೆಸರಿನಲ್ಲಿರುವುದು ಬೆಳಕಿಗೆ ಬಂತು. ವೃದ್ಧರಿಗೆ ವಿವಿಧ ಕಾರಣಗಳು, ಆಮಿಷಗಳನ್ನು ಒಡ್ಡಿ ಅವರಿಂದ ಅವರ ಬ್ಯಾಂಕ್ ಖಾತೆಯನ್ನು ಖರೀಸಲಾಗುತ್ತದೆ. ನಂತರ ಆ ಖಾತೆಯನ್ನು ಈ ವಂಚಕರೇ ನಿರ್ವಹಿಸಿ, ಹಣ ಪಡೆದ ಬಳಿಕ ಆ ಊರಿನಿಂದ ಪರಾರಿಯಾಗುತ್ತಾರೆ. ಇಲ್ಲಿ ಖಾತೆದಾರರು ಹಾಗೂ ವಂಚಕರಿಗೆ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ ಆರೋಪಿಗಳ ಪತ್ತೆ ಸಾಧ್ಯವಾಗುತ್ತಿಲ್ಲ’ ಎಂದು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಸೀತಾರಾಮ ತಿಳಿಸಿದ್ದಾರೆ.
‘ಪತಂಜಲಿ ಆಯುರ್ವೇದ ವ್ಯವಹಾರದ ಹೆಸರಿನಲ್ಲಿ 2018ರ ಅಕ್ಟೋಬರ್ ನಲ್ಲಿ ಕೋಟೇಶ್ವರದ ಅನುರಾಧ ಹೊಳ್ಳ ಅವರಿಗೆ 7.75 ಲಕ್ಷ ರೂ. ಹಾಗೂ 2017ರ ಆಗಸ್ಟ್‌ನಲ್ಲಿ ಮಲ್ಪೆಯ ಜಯಕರ ಕೋಟ್ಯಾನ್ ಅವರಿಗೆ 3.27ಲಕ್ಷ ರೂ. ವಂಚನೆ ಎಸಗಿದ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂಬಂಧ ಕೆಲವೊಂದು ಸುಳಿವು ಲಭ್ಯವಾಗಿದೆ. ಆನ್‌ಲೈನ್ ವಂಚಕರ ಜಾಲವು ಬಹುತೇಕವಾಗಿ ಹರಿದ್ವಾರ, ಪಶ್ಚಿಮ ಬಂಗಾಳ, ಛತ್ತಿಸ್‌ಗಡ್, ಜಾರ್ಖಂಡ್‌ಗಳಲ್ಲಿ ಕಾರ್ಯಾಚರಿಸುತ್ತಿರುತ್ತದೆ’ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ, ವಂಚಕ ಒಂದು ಪ್ರದೇಶದಲ್ಲಿ ಕುಳಿತು ಕರೆ ಮಾಡಿ ವಂಚಿಸಿ, ಅದರ ಲೊಕೇಶನ್ ಬೇರೆ ಬೇರೆ ಕಡೆಗಳಲ್ಲಿ ತೋರುವಂತೆ ಮಾಡಬಹುದಾಗಿದೆ. ಪೊಲೀಸರು ಆ ಲೊಕೇಶನ್ ಆಧಾರದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರೆ ಅಲ್ಲಿ ದೈಹಿಕವಾಗಿ ಯಾರು ಇರುವುದಿಲ್ಲ. ಆದುದರಿಂದ ದೂರವಾಣಿ ಕರೆ ಮಾಡಿ ಎಟಿಎಂ ಪಿನ್ ನಂಬರ್ ಪಡೆದು ವಂಚಿಸುವವರನ್ನು ಪತ್ತೆ ಮಾಡುವುದು ಅಷ್ಟು ಸುಲಭ ಅಲ್ಲ ಎಂದು ತಿಳಿಸಿದರು.
ಸ್ವೈಪಿಂಗ್ ಮೂಲಕವೂ ವಂಚನೆ
ಕರೆ ಮಾಡಿ ಎಟಿಎಂ ಪಿನ್ ನಂಬರ್ ಪಡೆದು ಖಾತೆಯಿಂದ ಹಣ ಲಪಾಟಿಸುವ ಜಾಲ ಮಾತ್ರವಲ್ಲದೆ ಸ್ವೈಪಿಂಗ್ ಮೆಶಿನ್‌ನಿಂದ ಎಟಿಎಂ ಪಿನ್ ನಂಬರ್ ಪಡೆದು ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸುವ ತಂಡಗಳು ಕೂಡ ಕಾರ್ಯಾಚರಿಸುತ್ತಿವೆ.
ಉಡುಪಿ ಸಂತೆಕಟ್ಟೆಯ ಫ್ಲಾವೀಯಾ ಡಯಾಸ್ ಜೀಯಾನ್ ಎಂಬವರು ತಮ್ಮ ಎಟಿಎಂ ಕಾರ್ಡ್‌ನ ನಂಬರ್ ಯಾರಿಗೂ ನೀಡದಿದ್ದರೂ ಅವರ ಬ್ಯಾಂಕ್ ಖಾತೆಯಿಂದ 77058.72ರೂ. ಮೋಸದಿಂದ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಈ ಪ್ರಕರಣದಲ್ಲಿ ಖಾತೆದಾರರ ಎಟಿಎಂ ಪಿನ್ ನಂಬರನ್ನು ಸ್ವೈಪಿಂಗ್ ಮೆಶಿನ್‌ನಿಂದ ಪಡೆದು ವಂಚಿಸಲಾಗಿದೆ. ಇಂತಹ ಪ್ರಕರಣ ಈ ಹಿಂದೆ ಮಣಿಪಾಲದಲ್ಲೂ ನಡೆದಿದೆ. ಕೆಲವು ಅಂಗಡಿಗಳಲ್ಲಿ ಎರಡೆರಡು ಸ್ವೈಪಿಂಗ್ ಮೆಶಿನ್ ಬಳಕೆ ಮಾಡುವ ಬಗ್ಗೆ ಗ್ರಾಹಕರು ಜಾಗೃತೆಯಿಂದ ಇರಬೇಕು ಎಂದು ಸೆನ್ ನಿರೀಕ್ಷಕ ಸೀತಾರಾಮ್ ತಿಳಿಸಿದರು.
ತಕ್ಷಣ ತಿಳಿಸಿದರೆ ಹಣ ವಾಪಾಸ್ಸು
ಆನ್‌ಲೈನ್ ಮೂಲಕ ವಂಚನೆ ಎಸಗಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ವರ್ಗಾಯಿಸಿದ ಹಣವನ್ನು ನಾಲ್ಕು ದಿನಗಳ ಒಳಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಂಬಂಧಪಟ್ಟ ಬ್ಯಾಂಕ್‌ಗೆ ಮಾಹಿತಿ ನೀಡಿದರೆ ಮರಳಿ ಪಡೆಯಲು ಅವಕಾಶ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ ತಿಳಿಸಿದ್ದಾರೆ.
ಇದೇ ರೀತಿಯ ಪ್ರಕರಣವೊಂದರಲ್ಲಿ 25ಲಕ್ಷ ರೂ. ಹಣವನ್ನು ವಂಚಕರ ಬ್ಯಾಂಕ್ ಖಾತೆಯಿಂದ ಮರಳಿ ಪಡೆಯಲಾಗಿದೆ. ಆದರೆ ಅವರು ಹಣವನ್ನು ಡ್ರಾ ಮಾಡಿದರೆ ಹಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಅದೇ ರೀತಿ ಎಟಿಎಂ ಮೂಲಕವೂ ವಂಚಿಸುವ ಹಣವನ್ನು ಕೂಡ ಮರಳಿ ಪಡೆಯಲು ಆಗುವುದಿಲ್ಲ. ಇದನ್ನು ತಡೆಯಲು ಕಾನೂನಿಗಿಂತ ಎಚ್ಚರಿಕೆ ಹಾಗೂ ಜಾಗೃತಿಯೇ ಪ್ರಮುಖ ದಾರಿಯಾಗಿದೆ ಎಂದು ಅವರು ಹೇಳಿದರು.







