ಪೋಕ್ಸೋ ಕಾಯಿದೆ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ: ಎಸ್ಪಿ ಇಂಗಿತ
ಉಡುಪಿ ಎಸ್ಪಿ ನೇರ ಪೋನ್ ಇನ್ ಕಾರ್ಯಕ್ರಮ

ಉಡುಪಿ, ಡಿ.21: ಶಾಲಾ ಮಕ್ಕಳ ಮೇಲೆ ಹೆಚ್ಚು ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯಿದೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ನಡೆದ ಎಸ್ಪಿ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಸಾರ್ವಜನಿಕರೊಬ್ಬರ ಸಲಹೆಗೆ ಸ್ಪಂದಿಸಿ ಅವರು ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಫೋಕ್ಸೋ ಕುರಿತ ಸಿನೆಮಾ ಪ್ರದರ್ಶನ ಅಥವಾ ತಜ್ಞರನ್ನು ಕರೆಸಿ ಉಪನ್ಯಾಸ ನೀಡುವುದೇ ಎಂಬುದರ ಬಗ್ಗೆ ಯೋಜಿಸಲಾಗುವುದು ಎಂದರು.
ಹೆಬ್ರಿ ತಾಲೂಕು ರಚನೆಯ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿ ರುವುದಕ್ಕೆ ಸಾರ್ವಜನಿಕರೊಬ್ಬರು ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಈಗಾಗಲೇ ನಿಗದಿಪಡಿಸಿರುವ ಜಾಗದಲ್ಲಿ ತಾಲೂಕು ಕಚೇರಿಯನ್ನು ನಿರ್ಮಿ ಸಲಿ ಎಂದು ಹೇಳಿದರು. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗು ವುದು ಎಂದು ಎಸ್ಪಿ ತಿಳಿಸಿದರು.
ಕಿನ್ನಿಮುಲ್ಕಿ ಗೋಪುರ ಬಳಿಯ ಸೇತುವೆಯಲ್ಲಿ ಪಾದಾಚಾರಿಗಳು ನಡೆಯಲು ಕಷ್ಟವಾಗುತ್ತಿದೆ ಎಂಬ ಹಿರಿಯ ನಾಗರಿಕರಿಗೆ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಸಂಬಂಧ ಉಡುಪಿ ವೃತ್ತ ನಿರೀಕ್ಷಕರು ಹಾಗೂ ಟ್ರಾಫಿಕ್ ಪೊಲೀಸ್ ಎಸ್ಸೈ ಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿ ಪರಿಹಾರೋಪಾಯಗಳನ್ನು ಕಂಡು ಕೊಳ್ಳಲಾಗುವುದು ಎಂದರು.
ಅಂಬಾಗಿಲು -ಪೆರಂಪಳ್ಳಿ ರಸ್ತೆಯಲ್ಲಿ ಅತ್ಯಂತ ವೇಗದಿಂದ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಸ್ಥಳೀಯರೊಬ್ಬರು ಮನವಿ ಮಾಡಿದರು. ದಿಢೀರ್ ಕಾರ್ಯಾಚರಣೆ ನಡೆಸಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಹೇಳಿದರು.
ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಕಳೆದ 10 ದಿನಗಳಿಂದ ವಿದ್ಯುತ್ ದೀಪಗಳಿಲ್ಲದೆ ಅಕ್ರಮ ಚಟುವಟಿಕೆಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ವ್ಯಕ್ತಿ ಯೊಬ್ಬರು ಕರೆ ಮಾಡಿ ದೂರಿದರು. ಕೋಟದಲ್ಲಿ ಕಳ್ಳತನ ಆಗಿರುವ ಬೈಕೊಂದು ಮಡಿಕೇರಿಯಲ್ಲಿ ಪತ್ತೆಯಾಗಿದ್ದು, ಅದನ್ನು ಪೊಲೀಸರಿಂದ ಪಡೆಯುವಾಗ ಸಾಕಷ್ಟು ತೊಂದರೆಗಳಾಗಿವೆ ಎಂದು ಬೈಕ್ ಮಾಲಕ ಆರೋಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ಉಡುಪಿ ನಗರದಲ್ಲಿ ಅನಧಿಕೃತ ರಿಕ್ಷಾ ನಿಲ್ದಾಣ, ಕೋಟ ವ್ಯಾಪ್ತಿಯಲ್ಲಿ ಮಟ್ಕಾ, ಅಕ್ರಮ ಗಣಿಗಾರಿಕೆ, ಗಂಗೊಳ್ಳಿಯಲ್ಲಿ ಎಲ್ಲೆಂದರಲ್ಲಿ ಬಸ್ ನಿಲುಗಡೆ, ಕಲ್ಸಂಕದಲ್ಲಿ ಟ್ರಾಫಿಕ್ ಸಮಸ್ಯೆ, ಕೆದೂರು ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತ ಹೊಟೇಲ್, ಬ್ರಹ್ಮಾವರ ಆಕಾಶವಾಣಿ ಬಳಿ ಹೆದ್ದಾರಿಯಲ್ಲೇ ಬಸ್‌ಗಳ ನಿಲುಗಡೆ, ಬ್ರಹ್ಮಾವರ ತಾಲೂಕು ಕಚೆೇರಿ ಬಳಿ ಪಾರ್ಕಿಂಗ್ ಹಾಗೂ ಕಸ ವಿಲೇವಾರಿ ಸಮಸ್ಯೆಗಳ ಕುರಿತು ದೂರುಗಳು ಬಂದವು.
ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಪೊಲೀಸ್ ನಿರೀಕ್ಷಕರುಗಳಾದ ಮಂಜುನಾಥ್, ಸುದರ್ಶನ್, ಸೀತಾರಾಮ್ ಮೊದಲಾದ ವರು ಹಾಜರಿದ್ದರು.
ವಾರದ ಪ್ರಕರಣಗಳು
ಉಡುಪಿ ಜಿಲ್ಲೆಯಲ್ಲಿ ಒಂದು ವಾರದೊಳಗೆ ಮೂರು ಮಟ್ಕಾ ಪ್ರಕರಣದಲ್ಲಿ ಮೂವರ ಬಂಧನ, ಎರಡು ಜೂಜಾಟ ಪ್ರಕರಣದಲ್ಲಿ 9 ಮಂದಿ ಬಂಧನ, ಒಂದು ಗಾಂಜಾ ಸೇವನೆ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಅದೇ ರೀತಿ ಕೋಟ್ಪಾ- 24, ಕುಡಿದು ಚಾಲನೆ-4, ಕರ್ಕಶ ಹಾರ್ನ್-93, ಮೊಬೈಲ್ ಬಳಸಿ ವಾಹನ ಚಾಲನೆ-16, ಹೆಲ್ಮೆಟ್ ಧರಿಸದೆ ವಾಹನ ಚಾಲನೆ- 849, ಅತಿವೇಗದ ಚಾಲನೆ-32, ಇತರ ಮೋಟಾರು ಕಾಯಿದೆ ಉಲ್ಲಂಘನೆ -1231 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.