ಬ್ಯಾಂಕ್ ಮುಷ್ಕರ: ಉಡುಪಿಯಲ್ಲಿ ಅಧಿಕಾರಿಗಳಿಂದ ಧರಣಿ

ಉಡುಪಿ, ಡಿ.21: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಸಂಘದ ಕರೆಯಂತೆ ಇಂದು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಉಡುಪಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಸಂಪೂರ್ಣ ಆಜ್ಞೆಯನ್ನು ಜಾರಿಗೊಳಿಸಬೇಕು. 11ನೆ ದ್ವಿತೀಯ ವೇತನ ಒಪ್ಪಂದವನ್ನು ಪೂರ್ಣವಾಗಿ ಜಾರಿಗೊಳಿಸಬೇಕು. ನೌಕರರ ವೇತನ ಪರಿಷ್ಕರಣೆ ಯನ್ನು ಶೀಘ್ರವಾಗಿ ಹಾಗೂ ಸಂಪೂರ್ಣವಾಗಿ ಜಾರಿಗೊಳಿಸಬೇಕು. ಅಧಿಕಾರಿ ಗಳ ಕೆಲಸದಲ್ಲಿ ಸಮತೋಲನ ತರಲು ಐದು ದಿನಗಳ ಕೆಲಸದ ವಾರವನ್ನು ಪ್ರಾರಂಭಿಸಬೇಕು ಎಂದು ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿ ವರ್ಗದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಘದ ಜಂಟಿ ಪ್ರಧಾನ ಕಾರ್ಯದಶಿರ್ ಯು.ಶಶಿಧರ ಶೆಟ್ಟಿ ಆಗ್ರಹಿಸಿದರು.
ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಪಿಂಚಣಿ, ಕುಟುಂಬ ಪಿಂಚಣಿಯನ್ನು ಸುಧಾರಣೆ ಮಾಡಬೇಕು. ನೂತನ ಪಿಂಚಣಿ ರದ್ದು ಮಾಡಿ ನಿರ್ದಿಷ್ಟ ಪಿಂಚಣಿ ಯನ್ನು ಜಾರಿಗೊಳಿಸಬೇಕು. ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ಗಳ ವಿಲೀನವನ್ನು ರದ್ದು ಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಕೃಷ್ಣಮೂರ್ತಿ, ವಿಜಯ ಬ್ಯಾಂಕಿನ ಶಿವಪ್ರಸಾದ್, ಎಸ್‌ಬಿಐ ಬ್ಯಾಂಕಿನ ವಿನೋದ್ ನಝ್ರತ್, ಕೆನರಾ ಬ್ಯಾಂಕಿನ ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯವೆಸಗದ ಬ್ಯಾಂಕ್: ಬಾಂಕ್ ಅಧಿಕಾರಿಗಳ ಸಂಘದ ಕರೆಯಂತೆ ಇಂದು ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು ಮುಷ್ಕರ ನಡೆಸಿದವು. ಕೆಲವು ಶಾಖೆಗಳು ಬಾಗಿಲು ತೆರೆದಿದ್ದರೂ, ಅಲ್ಲಿ ಯಾವುದೇ ಬ್ಯಾಂಕಿಂಗ್ ವ್ಯವಹಾರ ನಡೆಯಲಿಲ್ಲ. ಮೊದಲೇ ಮಾಹಿತಿ ಇದ್ದ ಕಾರಣ ಜನರೂ ಇಂದು ಬ್ಯಾಂಕ್‌ಗಳತ್ತ ಸುಳಿಯಲಿಲ್ಲ.