ಜ.8 -9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ
ಉಡುಪಿ, ಡಿ.21: ಕೇಂದ್ರ ಸರಕಾರದ ರೈತ, ಕಾರ್ಮಿಕ, ಜನವಿರೋಧಿ ಹಾಗೂ ದೇಶದ್ರೋಹಿ ನೀತಿಗಳನ್ನು ವಿರೋಧಿಸಿ ದೇಶದ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಬ್ಯಾಂಕ್ ವಿಮೆ, ಬಿಎಸ್‌ಎಲ್‌ಎಲ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜ.8 ಮತ್ತು 9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯಲಿರುವ ಈ ಮುಷ್ಕರವನ್ನು ಎಲ್ಲ ವಿಭಾಗದ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ವಿದ್ಯಾರ್ಥಿ ಯುವಜನ, ವ್ಯಾಪಾರಸ್ಥರು, ಸಾರಿಗೆ ನೌಕರರು, ಬಸ್ ಮಾಲಕರು ಬೆಂಬಲಿಸಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಹರತಾಳವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಕೆ.ಶಂಕರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೇಂದ್ರ ಸರಕಾರ ಅಗತ್ಯವಸ್ತುಗಳ ಬೆಲೆ ತಡೆಗಟ್ಟುವ ಬದಲು, ಸಬ್ಸಿಡಿ ಕಡಿತ ಮಾಡಿ ರೇಷನ್ ಪದ್ಧತಿಯನ್ನು ರದ್ದುಪಡಿಸಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ಸುಳ್ಳಾಗಿದೆ. ಏಳನೆ ವೇತನ ಆಯೋಗ ಶಿಫಾರಸ್ಸಿನಂತೆ ಕಾರ್ಮಿಕರಿಗೆ 18 ಸಾವಿರ ಕನಿಷ್ಠ ವೇತನ ನಿಗದಿ ಪಡಿಸಿಲ್ಲ ಎಂದು ಅವರು ದೂರಿದರು.
ಕಾರ್ಮಿಕ ಕಾನೂನುಗಳ ತಿದ್ದುಪಡಿ ನಿಲ್ಲಿಸಬೇಕು. ಸರಕಾರಿ ಸೇವೆಗಳಲ್ಲಿ ಶೇ.50, ಖಾಸಗಿ ಕ್ಷೇತ್ರಗಳಲ್ಲಿ ಶೇ.60 ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಲು ವಿಶೇಷ ಕಾನೂನು ರಚಿಸಬೇಕು. ಜೀವವಿಮೆಯಲ್ಲಿ ವಿದೇಶಿ ಬಂಡವಾಳ, ಬ್ಯಾಂಕ್‌ಗಳ ವಿಲೀನ ನಿಲ್ಲಿಸಬೇಕು. ಕಾರ್ಮಿಕರಿಗೆ ಕನಿಷ್ಠ 6ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಜಿಲ್ಲೆಯ ಮರಳು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಕೆ.ವಿ.ಭಟ್, ಬಾಲಕೃಷ್ಣ ಶೆಟ್ಟಿ, ವಿಶ್ವನಾಥ್ ರೈ, ರವೀಂದ್ರ ಎ. ಉಪಸ್ಥಿತರಿದ್ದರು.