ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಆದಾಯ ದ್ವಿಗುಣ: ಡಾ.ಪನ್ವಾರ್
ಬೆಂಗಳೂರು, ಡಿ.21: ದೇಶದ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಮೋದಿಪುರ ಭಾರತೀಯ ಸಮಗ್ರ ಕೃಷಿ ಪದ್ಧತಿಗಳ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎ.ಎಸ್.ಪನ್ವಾರ್ ಸಲಹೆ ನೀಡಿದ್ದಾರೆ.
ನಗರದ ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಐಸಿಎಆರ್- ಮೋದಿಪುರ ಭಾರತೀಯ ಸಮಗ್ರ ಕೃಷಿ ಪದ್ದತಿಗಳ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಮಗ್ರ ಕೃಷಿ ಪದ್ದತಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ರೈತರು ಆಧುನಿಕತೆಗೆ ತಕ್ಕಂತೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ 2022 ರ ವೇಳೆಗೆ ಕೃಷಿಯೂ ವೃದ್ಧಿಯಾಗುತ್ತದೆ ಹಾಗೂ ರೈತರ ಆದಾಯವೂ ಹೆಚ್ಚಾಗುತ್ತದೆ ಎಂದು ಅವರು ನುಡಿದರು.
ದೇಶದ 25 ಮುಖ್ಯ ಕೇಂದ್ರಗಳಲ್ಲಿ, 11 ಉಪಕೇಂದ್ರಗಳಲ್ಲಿ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ದತಿಗಳನ್ನು, ಬೇಸಾಯ ಪದ್ದತಿಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಪ್ರತಿಯೊಬ್ಬ ರೈತರ ಆದಾಯ ದ್ವಿಗುಣಗೊಳಿಸಲು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದರು. ರೈತರು ನೀರು ಮತ್ತು ಶಕ್ತಿಯ ಸಮರ್ಪಕ ಬಳಕೆಗೆ ಸಮಗ್ರ ಕೃಷಿ ಅಗತ್ಯವಾಗಿದೆ. ಅದಕ್ಕಾಗಿ ಭಾರತದ 20 ರಾಜ್ಯಗಳಲ್ಲಿ ಈಗಾಗಲೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಮಾತನಾಡಿ, ಕೃಷಿ ವಿವಿಯು 1970ರ ದಶಕದಲ್ಲೇ ಸಮಗ್ರ ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಿಸಿತ್ತು. 2000 ರಲ್ಲಿ ಇದರ ಹೆಸರನ್ನು ಸಮಗ್ರ ಕೃಷಿ ಪದ್ದತಿ ಎಂದು ಬದಲಾಯಿಸಲಾಯಿತು. ಈ ಪದ್ದತಿಯಲ್ಲಿ ಕೈಗೊಂಡ ಸಂಶೋಧನಾ ಫಲಿತಾಂಶದಿಂದ ಸಾಕಷ್ಟು ಬದಲಾವಣೆಗಳು ಕಂಡುಬಂದವು ಎಂದು ಹೇಳಿದರು.
ಇತ್ತೀಚಿಗೆ ರೈತರ ಆದಾಯ ಶೇ. 4.37 ರಷ್ಟು ಹೆಚ್ಚಳವಾಗುತ್ತಿದ್ದು, ಅದಕ್ಕೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದೇ ಕಾರಣವಾಗಿದೆ. ಬೆಳೆಗಾರರ (ಉತ್ಪಾದಕರ)ಸಂಘ ಆರಂಭ, ಕೃಷಿ ಉಪಕರಣಗಳ ಕೇಂದ್ರ ಪ್ರಾರಂಭ, ಸಹಕಾರ ರೂಪದಲ್ಲಿ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡಿದ್ದೆ ಲಾಭವಾಗಿದೆ ಎಂದು ತಿಳಿಸಿದರು.
ದೇಶದ ಜನಸಂಖ್ಯೆಯ ಶೇ.1.90 ರಷ್ಟು ಹೆಚ್ಚಳವಾಗಿದೆ. ಆದರೆ, ಆಹಾರ ಉತ್ಪಾದನೆಯಲ್ಲಿ ಶೇ.1.20 ರಷ್ಟಿದ್ದು, ಶೇ.0.7 ರಷ್ಟು ಕೊರತೆಯಾಗುತ್ತಿದೆ. ಅದನ್ನು ಸರಿದೂಗಿಸಲು ಕೃಷಿಕರು ಸಮಗ್ರವಾದ ಪದ್ದತಿಗಳನ್ನು ಅನುಸರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಮಗ್ರ ಕೃಷಿ ಪದ್ದತಿಗಳ ಪುಸ್ತಕ ಮತ್ತು ತಾಂತ್ರಿಕ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು. ಸಂಶೋಧನಾ ನಿರ್ದೇಶಕ ಡಾ.ವೈ.ಜಿ.ಷಡಕ್ಷರಿ, ಸಹ ಪ್ರಾಧ್ಯಾಪಕ ಡಾ.ಸಂಜಯ್ ಉಪಸ್ಥಿತರಿದ್ದರು.







