ಕರಾವಳಿ ವಿಶ್ವಕ್ಕೆ ದಿಕ್ಸೂಚಿ: ಸಚಿವ ಯು.ಟಿ.ಖಾದರ್
ದ.ಕ. ಜಿಲ್ಲಾ ಕರಾವಳಿ ಉತ್ಸವ

ಮಂಗಳೂರು, ಡಿ.21: ಕರಾವಳಿಯ ಸಂಸ್ಕೃತಿ, ಪಾರಂಪರಿಕ ಹಿನ್ನೆಲೆಯಿಂದ ಇಂದು ಕರಾವಳಿ ಹೆಸರುಗಳಿಸುತ್ತಿದೆ. ವಿದೇಶಗಳಲ್ಲಿರುವವರಿಗೆ ಕರಾವಳಿಯ ಬಗ್ಗೆ ವಿಶೇಷ ಒಲವು ಇದ್ದು, ಕರಾವಳಿ ವಿಶ್ವಕ್ಕೇ ದಿಕ್ಸೂಚಿಯಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೆಮ್ಮೆ ವ್ಯಕ್ತಪಡಿಸಿದರು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಲಾಗಿದ್ದ ದ.ಕ. ಜಿಲ್ಲಾ ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯು ಆರ್ಥಿಕ ಚಲನವಲನ ಇದ್ದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ರಾಜ್ಯದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರನ್ನು ಹೊರತುಪಡಿಸಿ ದರೆ ಮಂಗಳೂರು ಹಾಗೂ ಮೈಸೂರು ನಂತರದ ಸ್ಥಾನಗಳಲ್ಲಿವೆ. ಮುಂದೊಂದು ದಿನ ಕರಾವಳಿಯ ಕೇಂದ್ರಸ್ಥಾನವಾಗಿರುವ ಮಂಗಳೂರು ಅದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಕೆಐಡಿಬಿಎ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಜೊತೆ ಸಭೆಗಳನ್ನು ನಡೆಸಿ ಸಮಾ ಲೋಚನೆ ನಡೆಸಲಾಗಿದೆ. ಅಮೃತ ಯೋಜನೆಯಡಿ ಕುಡಿಯುವ ನೀರಿಗಾಗಿ ಕೋಟ್ಯಂತರ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ಮೂಲಭೂತ ಸೌಕರ್ಯಗಳಿಗೆ ಸರಕಾರ ಆದ್ಯತೆ ನೀಡಲಿದೆ. ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಕರಾವಳಿ ಉತ್ಸವದಿಂದಾಗಿ ಕರಾವಳಿ ಪ್ರದೇಶದ ಐತಿಹಾಸಿಕ ಹಿನ್ನೆಲೆ, ಇಂದಿನ ದಿನಮಾನದಲ್ಲಿ ಮಂಗಳೂರಿನ ಸ್ಥಾನಮಾನ, ಭವಿಷ್ಯದಲ್ಲಿ ಕರಾವಳಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಜಿಲ್ಲೆಯ ಸಾಂಸ್ಕೃತಿಕ ಆಚಾರ, ವಿಚಾರಗಳನ್ನು ಅವಲೋಕಿಸಬಹುದು. ಕರಾವಳಿ ಉತ್ಸವವನ್ನು ಹಮ್ಮಿಕೊಳ್ಳುವ ಮೂಲಕ ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕರಾವಳಿ ಉತ್ಸವದಲ್ಲಿ ಕರಾವಳಿಯ ಜಾನಪದ ಕಲೆಗಳನ್ನು ಪ್ರದರ್ಶಿಸುವುದಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಕಲೆಗಳನ್ನು ಪ್ರದರ್ಶಿಸಲಾಗಿದೆ. ಜಿಲ್ಲೆಯ ಜನತೆ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಲು ಸಚಿವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಪಂ ಸಿಇಒ ಡಾ. ಸೆಲ್ವಮಣಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮೇಯರ್ ಭಾಸ್ಕರ್ ಕೆ., ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ಮಮತಾ ಗಟ್ಟಿ, ಶಾಹುಲ್ ಹಮೀದ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರದೀಪ್‌ಕುಮಾರ್ ಕಲ್ಕೂರ, ಜಿಲ್ಲಾ ಉಪ ವಿಭಾಗದ ಸಹಾಯಕ ಆಯುಕ್ತ ರವಿಚಂದ್ರ ನಾಯಕ್. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಶಸ್ವಿನಿ ಬಳಗದಿಂದ ಪ್ರಾರ್ಥಿಸಲಾಯಿತು. ಅಪರ ಜಿಲ್ಲಾಧೀಕಾರಿ ಕುಮಾರ್ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕರಾವಳಿ ಉತ್ಸವದಲ್ಲಿ ಕರ್ನಾಟಕ ದರ್ಶನ
ಕರಾವಳಿ ಉತ್ಸವದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯ ಸಾಂಸ್ಕೃತಿಕ, ಜಾನಪದ ಶೈಲಿಯ ಕಲೆಗಳನ್ನು ಪ್ರದರ್ಶಿಸುತ್ತಿರುವುದನ್ನು ಗಮನಿಸಿದರೆ, ಇದು ಕರಾವಳಿ ಉತ್ಸವದಲ್ಲಿ ಕರ್ನಾಟಕ ದರ್ಶನವಾಗುವಂತಿದೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್, ಸಂತಸ ವ್ಯಕ್ತಪಡಿಸಿದರು.
ಕರಾವಳಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿಯು ವೀರಭೂಮಿಯಾಗಿದೆ. ಪೋರ್ಚುಗೀಸರು ಕರಾವಳಿಯನ್ನು ಪ್ರವೇಶಿಸದಂತೆ ತಡೆಯುವಲ್ಲಿ ರಾಣಿ ಅಬ್ಬಕ್ಕ ಯಶಸ್ವಿಯಾಗಿದ್ದರು. ಅಂತಹ ಐತಿಹಾಸಿಕ ಹಿನ್ನೆಲೆಯ ಕರಾವಳಿ ನಮ್ಮದಾಗಿದೆ. ಕರಾವಳಿಯು ತನ್ನ ಸಂಗೀತ ಕ್ಷೇತ್ರಕ್ಕೆ ಬೆಂಬಲವಾಗಿ ನಿಂತಿದೆ. ಕರಾವಳಿಯೇ ತನ್ನ ಸಾಧನೆಗೆ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದರು.
ಕರಾವಳಿ ಉತ್ಸವದಲ್ಲಿ ಸಚಿವ, ಶಾಸಕರ ಗೈರು
ಕರಾವಳಿ ಉತ್ಸವ ಮೈದಾನದಲ್ಲಿ ಸರಕಾರದಿಂದ ಆಯೋಜಿಸಲಾಗಿದ್ದ ದ.ಕ. ಜಿಲ್ಲಾ ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಸಚಿವದ್ವಯರು ಸೇರಿದಂತೆ ಬಿಜೆಪಿ ಶಾಸಕರು ಗೈರಾಗಿದ್ದರು.
ಪ್ರವಾಸೋದ್ಯಮ ಮತ್ತು ರೇಷ್ಮೆ ಇಲಾಖೆ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ, ರಾಝೇಶ್ ನಾಯ್ಕಿ, ಉಮಾನಾಥ ಕೋಟ್ಯಾನ್, ಕೆ.ಪ್ರತಾಪಚಂದ್ರ ಶೆಟ್ಟಿ, ಕೆ.ಹರೀಶ್ ಕುಮಾರ್, ಎಸ್.ಎಲ್.ಭೋಜೇಗೌಡ, ಅಂಗಾರ ಎಸ್., ಹರೀಶ್ ಪೂಂಜ, ಸಂಜೀವ ಮಠಂದೂರು, ಐವನ್ ಡಿಸೋಜ, ಬಿ.ಎಂ.ಫಾರೂಕ್, ಆಯನೂರು ಮಂಜುನಾಥ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೈರಾಗಿದ್ದರು.