ವೈಟ್ ಟಾಪಿಂಗ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಬೆಂಗಳೂರು, ಡಿ.21: ನಗರದಲ್ಲಿ ಹೆಚ್ಚಾಗುತ್ತಿರುವ ವಾಹನ ದಟ್ಟನೆ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆಯೋ ಅದನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಮತ್ತಿತರ ಅಧಿಕಾರಿಗಳೊಂದಿಗೆ ವೈಟ್ ಟಾಪಿಂಗ್ ಕಾಮಗಾರಿಯ ಬಗ್ಗೆ ಚರ್ಚಿಸಿ ಮಾತನಾಡಿದ ಅವರು, ಕೆಲವೆಡೆ ವೈಟ್ ಟಾಪಿಂಗ್ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನರಿತು ಕಾಮಗಾರಿ ತ್ವರಿತ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕಾಮಗಾರಿಗೆ ಎಂ40 ಕಾಂಕ್ರೀಟ್ ಬಳಕೆ ಮಾಡುವಂತೆ ಸೂಚಿಸಲಾಗಿದೆ ಹಾಗೂ 28 ಕಡೆ ಹೊಸದಾಗಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತದೆ. ಇದು ಫೆಬ್ರವರಿಯಿಂದ ಪ್ರಾರಂಭವಾಗಲಿದೆ. ಹೊಸ ಫೇವರ್ಸ್ ಹಾಕಲು ಗುತ್ತಿಗೆದಾರರಿಗೆ ಆದೇಶಿಸಲಾಗಿದೆ. ಸರ್ವೀಸ್ ರಸ್ತೆ ಇಲ್ಲದ ಕಡೆ ಸರ್ವೀಸ್ ರಸ್ತೆಗಳನ್ನು ಮಾಡಿಕೊಂಡು ಮುಖ್ಯ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಬಿಸುವಂತೆ ಸೂಚಿಸಲಾಗುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಮಾತನಾಡಿ, ಎಲ್ಲೆಲ್ಲಿ ಸರ್ವೀಸ್ ರಸ್ತೆಗಳಿಲ್ಲವೋ ಅಲ್ಲಿ ಸರ್ವೀಸ್ ರಸ್ತೆ ಮಾಡಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದೇವೆ. ವೈಟ್ ಟಾಪಿಂಗ್ ಕಾಮಗಾರಿಯಿಂದ ಕೆಲ ಸಮಯ ಸಮಸ್ಯೆಯಾಗಬಹುದು. ಆದರೆ, ಒಂದೆರಡು ತಿಂಗಳ ಬಳಿಕ ಇದು ಸರಿಯಾಗಲಿದೆ. ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದೆಯೋ ಆ ಸ್ಥಳಗಳಲ್ಲಿ ಸಂಚರಿಸುವ ಜನರು ಬೇಗ ಮನೆ ಬಿಡುವುದು ಒಳಿತು ಎಂದು ಅವರು ಸಲಹೆ ನೀಡಿದರು.







