ಉಡುಪಿ ರಿಕ್ಷಾಗಳಿಗೆ ಕಲರ್ ಕೋಡಿಂಗ್ ವ್ಯವಸ್ಥೆ ಜಾರಿಗೆ ಆಗ್ರಹ
ಉಡುಪಿ, ಡಿ.21: ಉಡುಪಿ ನಗರದ ಅಟೋರಿಕ್ಷಾಗಳಿಗೆ ಕಲರ್ ಕೋಡಿಂಗ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ಮಾಹಿತಿ ಸೇವಾ ಸಮಿತಿಯು ಒತ್ತಾಯಿಸಿದೆ.
ನಗರಸಭೆಯು ನಿರ್ಮಿಸಿಕೊಟ್ಟ ಎಲ್ಲಾ ನಿಲ್ದಾಣಗಳಲ್ಲಿ ನಗರ ಪರವಾನಿಗೆ ಹೊಂದಿರುವ ಆಟೊ ಚಾಲಕರಿಗೆ ದುಡಿಯಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಉಡುಪಿ ನಗರದ ಆಟೊ ನಿಲ್ದಾಣಗಳಲ್ಲಿ ಆಯಾ ನಿಲ್ದಾಣದವರು ಮಾಡಿಕೊಂಡ ಕಾನೂನುಗಳೇ ನಡೆಯುತ್ತ್ತಿದೆ. ಅವರ ನಿಲ್ದಾಣದ ಚಾಲಕರನ್ನು ಹೊರತುಪಡಿಸಿ ಇತರರಿಗೆ ದುಡಿಯಲು ಬಿಡುತ್ತಿಲ್ಲ ಎಂದು ಸಮಿತಿಯ ರಾಜ್ಯಾಧ್ಯಕ್ಷ ಜಿ.ಎ.ಕೋಟಿಯಾರ್ ಸುದ್ದಿಗೋಷ್ಠಿಯಲ್ಲಿಂದು ದೂರಿದರು.
ನಗರಸಭೆ ವ್ಯಾಪ್ತಿಯಲ್ಲಿ ವಲಯ 1ರ ಮತ್ತು ನಗರದಿಂದ ಐದು ಕಿ.ಮೀ. ಹೊರಗಡೆ ವಲಯ 2ರ ರಿಕ್ಷಾಗಳು ದುಡಿಯಲು ಅವಕಾಶ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಕಲರ್ ಕೋಡಿಂಗ್ ಜಾರಿಗಾಗಿ ಕಳೆದ ಮೂರು ತಿಂಗಳಿನಿಂದ ಹೋರಾಟ ನಡೆಯುತ್ತಿದೆ. ಇಲಾಖೆ ಅಧಿಕಾರಿ ಗಳಿಂದ ಕಲರ್ ಕೋಡಿಂಗ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಉತ್ತಮ ಸ್ಪಂದನೆ ದೊರೆತಿದೆ. ಆದರೆ ಕಾಣದ ಕೈಗಳು ಹಾಗೂ ರಾಜಕಾರಣಿಗಳು ಕಲರ್ ಕೋಡಿಂಗ್ ಜಾರಿಯಾಗದಂತೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಿಕ್ಷಾ ಚಾಲಕರು ಕಡ್ಡಾಯವಾಗಿ ಮೀಟರ್ ಹಾಗೂ ಸಮವಸ್ತ್ರ ಹಾಕಬೇಕು. ಎಲ್ಲ ರಿಕ್ಷಾ ನಿಲ್ದಾಣಗಳಲ್ಲಿ ನಗರ ಪರವಾನಿಗೆ ಅಟೋರಿಕ್ಷಾಗಳು ದುಡಿಯು ವಂತಾಗಬೇಕು. ರಿಕ್ಷಾ ಚಾಲಕರಿಗೆ ಇಎಸ್‌ಐ, ಪಿಎಫ್, ಪಿಂಚಣಿ ಯೋಜನೆ ಜಾರಿಗೆ ತರಬೇಕು. ರಿಕ್ಷಾಗಳಿಗೆ ಎರಡು ಪಟ್ಟು ಏರಿಕೆ ಮಾಡಿರುವ ಇನ್ಸೂರೆನ್ಸ್ ದರವನ್ನು ಕಡಿಮೆ ಮಾಡಬೇಕು. ರಿಕ್ಷಾಗಳ ಮೀಟರ್ ದರವನ್ನು ಪರಿಷ್ಕರಣೆ ಮಾಡಬೇಕು. ರಿಕ್ಷಾ ಚಾಲಕರಿಗೆ ಗ್ಯಾಸ್‌ಗಳಿಗೆ ಸಬ್ಸಿಡಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪಾದೂರು ಅಧ್ಯಕ್ಷ ಹರಿಕೃಷ್ಣ ತಂತ್ರಿ, ಕಾಪು ಮಹಿಳಾ ಪ್ರತಿನಿಧಿ ಐರಿನ್ ತಾವ್ರೊ, ಮಾಸ್ ಇಂಡಿಯಾ ಪದಾಧಿಕಾರಿ ಗೀತಾ ಸಿ.ಪೂಜಾರಿ ಉಪಸ್ಥಿತರಿದ್ದರು.







