ಡಿ. 24: ಅನಾರೋಗ್ಯ ಪೀಡಿತ ಮಕ್ಕಳಿಗೆ 16 ಲಕ್ಷ ರೂ. ವಿತರಣೆ
ಉಡುಪಿ, ಡಿ.21: ರವಿ ಕಟಪಾಡಿ ಶ್ರೀಕೃಷ್ಣಾ ಜನ್ಮಾಷ್ಟಮಿಯ ಸಂದರ್ಭ ವೇಷಧರಿಸಿ ಅಭಿಯಾನದ ಮೂಲಕ ಸಂಗ್ರಹಿಸಿದ 16ಲಕ್ಷ ರೂ. ದೇಣಿಗೆಯನ್ನು ಐವರು ಅನಾರೋಗ್ಯ ಪೀಡಿತ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮವು ಡಿ.24 ರಂದು ಸಂಜೆ4:30ಕ್ಕೆ ಕಟಪಾಡಿ ವಿಜಯಾ ಬ್ಯಾಂಕ್ ಎದುರುಗಡೆ ನಡೆಯಲಿದೆ.
ರವಿ ಕಟಪಾಡಿಯ ಸಾಮಾಜಿಕ ಕಳಕಳಿಯನ್ನು ಮಿಲಾಪ್ ಸಂಸ್ಥೆಯು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದು, ಇದನ್ನು ನೇರವಾಗಿ 1.30ಕೋಟಿ ಹಾಗೂ ಪರೋಕ್ಷವಾಗಿ 3 ಕೋಟಿ ಮಂದಿ ವೀಕ್ಷಿಸಿದ್ದರು. ಈ ಅಭಿಯಾನದ ಮೂಲಕ 16ಲಕ್ಷ ರೂ. ದೇಣಿಗೆ ಸಂಗ್ರಹಿಸಲಾಗಿತ್ತು ಎಂದು ಮಹೇಶ್ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರವಿ ಕಟಪಾಡಿ ಕಳೆದ ಐದು ವರ್ಷಗಳಲ್ಲಿ ಕೃಷ್ಣಾಜನ್ಮಾಷ್ಟಮಿಯ ಸಂದರ್ಭ ವೇಷಧರಿಸಿ ಒಟ್ಟು 35,28,810ರೂ. ಸಂಗ್ರಹಿಸಿ 27 ಮಕ್ಕಳ ಚಿಕಿತ್ಸೆಗೆ ಧನ ಸಹಾಯ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕೇಮಾರು ಶ್ರೀಈಶವಿಠಲ ದಾಸ ಸ್ವಾಮೀಜಿ ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ರವಿ ಕಟಪಾಡಿ, ಚರಣ್, ಸುಧೀಶ್ ಉಪಸ್ಥಿತರಿದ್ದರು.