ಗ್ರಾಪಂ ಚುನಾವಣೆ: ಒಟ್ಟು 242 ನಾಮಪತ್ರ ಕ್ರಮಬದ್ಧ
ಉಡುಪಿ, ಡಿ. 21: ಕುಂದಾಪುರ ತಾಲೂಕಿನ ಗಂಗೊಳ್ಳಿ, ಬೈಂದೂರು ತಾಲೂಕಿನ ಬೈಂದೂರು ಮತ್ತು ಯಡ್ತರೆ ಗ್ರಾಪಂಗಳಿಗೆ, ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಗಾಗಿ ತೆರವುಗೊಂಡ ಎಂಟು ಗ್ರಾಪಂಗಳ ಎಂಟು ಸ್ಥಾನಗಳಿಗೆ ಜ.2ರಂದು ನಡೆಯುವ ಚುನಾವಣೆಗಾಗಿ ಒಟ್ಟು 249 ನಾಮಪತ್ರಗಳನ್ನು ಸಲ್ಲಿಸಲಾಗಿದ್ದು, ಪರಿಶೀಲನೆಯ ಬಳಿಕ 7 ನಾಮಪತ್ರಗಳು ತಿರಸ್ಕೃತಗೊಂಡಿವೆ ಹಾಗೂ 242 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಅವಧಿ ಮುಕ್ತಾಯಗೊಂಡ ಗಂಗೊಳ್ಳಿ ಗ್ರಾಪಂನ ಎಂಟು ಕ್ಷೇತ್ರಗಳ 33 ಸ್ಥಾನ ಗಳಿಗೆ 96 ನಾಮಪತ್ರಗಳು ಸಲ್ಲಿಕೆಯಾಗಿದ್ದು ಎರಡು ತಿರಸ್ಕೃತಗೊಂಡು 94 ಕ್ರಮಬದ್ಧವಾಗಿವೆ. ಬೈಂದೂರು ಗ್ರಾಪಂನ ಆರು ಕ್ಷೇತ್ರಗಳ 21 ಸ್ಥಾನಗಳಿಗೆ 64 ನಾಮಪತ್ರ ಸಲ್ಲಿಕೆಯಾಗಿ ಮೂರು ತಿರಸ್ಕೃತಗೊಂಡಿದ್ದು 61 ಕ್ರಮಬದ್ಧವಾಗಿವೆ. ಅದೇ ರೀತಿ ಯಡ್ತರೆ ಗ್ರಾಪಂನ ಎಂಟು ಕ್ಷೇತ್ರಗಳ 25 ಸ್ಥಾನಗಳಿಗೆ 68 ಮಂದಿ ನಾಮಪತ್ರ ಸಲ್ಲಿಸಿದ್ದು, ಎರಡು ತಿರಸ್ಕೃತಗೊಂಡು 66 ಕ್ರಮಬದ್ಧವಾಗಿವೆ.
ಇದರೊಂದಿಗೆ ಹಂದಾಡಿ ಗ್ರಾಪಂನ 1 ಸ್ಥಾನಕ್ಕೆ 5, ಬಾರಕೂರು ಒಂದು ಸ್ಥಾನಕ್ಕೆ ಮೂರು, ಯಡ್ತಾಡಿ ಒಂದಕ್ಕೆ 4, ಕಡೆಕಾರು ಒಂದಕ್ಕೆ ಎರಡು, ಬೈಲೂರು ಒಂದು ಸ್ಥಾನಕ್ಕೆ ಎರಡು, ನಿಟ್ಟೆ ಕೇವಲ ಒಂದು, ಉಳ್ಳೂರು ಕೇವಲ ಒಂದು ಹಾಗೂ ಕೆರ್ಗಾಲು ಗ್ರಾಪಂನ ಒಂದು ಸ್ಥಾನಕ್ಕೆ 3 ನಾಮಪತ್ರ ಸಲ್ಲಿಕೆಯಾಗಿವೆ.
ಈ ಮೂಲಕ ಜ.2ರಂದು ಮತದಾನ ನಡೆಯುವ ಒಟ್ಟು 87 ಸ್ಥಾನಗಳಿಗೆ ಸಲ್ಲಿಕೆಯಾದ ಮತಪತ್ರಗಳಲ್ಲಿ 242 ಕ್ರಮಬದ್ಧವಾಗಿವೆ. ಇವುಗಳಲ್ಲಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದು, ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಸೋಮವಾರ ಡಿ.24 ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.